ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಧರ್ಮದ ತಿರುಳನ್ನು ತಿಳಿಸುವ ಕೆಲಸವಾಗಬೇಕು. ಅದು ನಡೆಯದಿರುವುದರಿಂದಲೇ ಯುವಜನರು ಯಾರಿಂದಲೋ ಪ್ರೇರಿತರಾಗಿ ಮತ್ತೊಂದು ಧರ್ಮವನ್ನು ದೂಷಿಸುವ ಕಾರ್ಯದಲ್ಲಿ ತೊಡಗುತ್ತಾರೆ ಎಂದು ಗೌರಿಗದ್ದೆ ದತ್ತಾಶ್ರಮದ ಶ್ರೀ ವಿನಯ ಗುರೂಜಿ ಹೇಳಿದರು.
ಅವರು ಶುಕ್ರವಾರ ಬೈಂದೂರು ರತ್ತುಬಾಯಿ ಜನತಾ ಪ್ರೌಢಶಾಲೆಯ ಸುವರ್ಣ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿದ ಬಳಿಕ ಆಶೀರ್ವಚನ ನೀಡಿ ಕೈಯಲ್ಲಿ ಬಗೆ ಬಗೆಯ ಉಂಗುರು ಧರಿಸುವುದರಿಂದ ಅದೃಷ್ಟ ಕುಲಾಯಿಸುವುದಿಲ್ಲ. ಇಂತಹ ಅಂಧ ವಿಶ್ವಾಸವನ್ನು ಬಿಟ್ಟು ಜ್ಞಾನದ ಕಡೆ ನಡೆಯಿರಿ. ಬದುಕಿನಲ್ಲಿ ಅದೃಷ್ಟ ಎನ್ನುವ ಶಬ್ದವೇ ಇಲ್ಲ. ಕೆಲಸ ಮಾಡಿದವರಿಗೆ ಪ್ರತಿಫಲ ಸಿಕ್ಕೆ ಸಿಗುತ್ತದೆ. ಶಾಸ್ತ್ರವನ್ನು ಸತ್ಯದ ಆಧಾರದ ಮೇಲೆ ಅರಿತು ನಡೆದರೆ, ಶ್ರಮವಹಿಸಿ ದುಡಿದರೆ ಎಲ್ಲವೂ ಸಿದ್ಧಿಸುತ್ತದೆ ಎಂದರು.
Video
ದೊಡ್ಡ ದೇವಸ್ಥಾನ, ಉತ್ಸವಗಳನ್ನು ಮಾಡುವ ಜೊತೆಗೆ ಊರಿನ ಅಭಿವೃದ್ಧಿಯ ಬಗೆಗೂ ಗಮನ ಹರಿಸಿ. ಎಲ್ಲವನ್ನೂ ಸರಕಾರದಿಂದ ನಿರೀಕ್ಷಿಸುವ ಮೊದಲು ನಮ್ಮ ಊರಿಗೆ ನಾವೇನು ಮಾಡಬಹುದೆಂಬುದನ್ನು ಯೋಚಿಸಬೇಕಿದೆ. ಶಿಕ್ಷಣ ಮತ್ತು ಆರೋಗ್ಯ ಇಂದಿನ ಆದ್ಯತೆಯಾಗಿದ್ದು ಅದಕ್ಕೆ ಪೂರಕವಾಗಿ ನಮ್ಮಿಂದಾದ ಕೆಲಸ ಮಾಡುವುದು ಅತೀ ಅಗತ್ಯ ಎಂದರು.
ಹೆಮ್ಮಾಡಿ ಶ್ರಿ ವಿ.ವಿ.ವಿ ಮಂಡಳಿ ಅಧ್ಯಕ್ಷ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬಂದರು ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ. ಬಾಬು ಶೆಟ್ಟಿ, ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯೆ ಸುಜಾತ ದೇವಾಡಿಗ, ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಬೈಂದೂರು ಇದರ ಆಡಳಿತ ಟ್ರಸ್ಟೀ ಬಿ. ರಾಮಕೃಷ್ಣ ಶೇರುಗಾರ್, ಮೊದಲಾದವರು ಅತಿಥಿಗಳಾಗಿದ್ದರು. ಸುವರ್ಣ ಸಂಭ್ರಮ ಉತ್ಸವ ಸಮಿತಿ ಜೊತೆ ಕಾರ್ಯದರ್ಶಿ ರಘುರಾಮ ಕೆ. ಪೂಜಾರಿ, ಸಂಘಟನಾ ಕಾರ್ಯದರ್ಶಿ ಮಂಜುನಾಥ ಶೆಟ್ಟಿ, ಶ್ರೀ ವಿ.ವಿ.ವಿ ಮಂಡಳಿಯ ಕಾರ್ಯದರ್ಶಿ ಕೆ. ಮಾಧವ ಪೂಜಾರಿ, ನಿರ್ದೇಶಕರುಗಳಾದ ರಾಜು ದೇವಾಡಿಗ, ಕೃಷ್ಣ ಪೂಜಾರಿ, ರಾಮ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಶ್ರೀನಿವಾಸ್ ಶುಭಾಶಂಸನೆಗೈದರು. ಬೆಂಗಳೂರು ಭೂಮಾಪನ ಇಲಾಖೆ ಉಪನಿರ್ದೇಶಕಿ ಸರಸ್ವತಿ ಹುದಾರ್ ಟಿ. ಸ್ವಸ್ತಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀ ವಿನಯ ಗುರೂಜಿ ಶಾಲೆಯ ಅಡುಗೆ ಕೆಲಸ ಮಾಡುವ ಮಹಿಳೆಯನ್ನು ಗೌರವಿಸಿದ್ದು ವಿಶೇಷವಾಗಿತ್ತು. ಶ್ರೀ ವಿನಯ ಗುರೂಜಿ ಅವರನ್ನು ಸಂಸ್ಥೆಯ ಪರವಾಗಿ ಕೆ. ಗೋಪಾಲ ಪೂಜಾರಿ ದಂಪತಿಗಳು ಗೌರವಿಸಿದರು. ದಾನಿಗಳಾದ ರಾಮಕೃಷ್ಣ ಶೇರುಗಾರ್, ವೆಂಕಟರಮಣ ಬಿಜೂರು, ಹರೀಶ್ ಮೊದಲಾದವರನ್ನು ಸನ್ಮಾನಿಸಲಾಯಿತು. ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತ ಎಸ್. ರಾಜು ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಸುವರ್ಣ ಸಂಭ್ರಮ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿದರು. ಶಾಲೆಯ ಹಿಂದಿನ ಮುಖ್ಯೋಪಧ್ಯಾಯರಾದ ಬಿ. ವಿಶ್ವೇಶ್ವರ ಅಡಿಗ ಸುವರ್ಣ ಸಂಭ್ರಮದ ಹಿನ್ನೋಟವನ್ನು ಮೆಲಕು ಹಾಕಿದರು. ಶಾಲೆಯ ಮುಖ್ಯೋಪಧ್ಯಾಯ ಮಂಜು ಕಾಳವಾರ ಸಂಸ್ಥೆಯ ವರದಿ ವಾಚಿಸಿದರು. ಶಿಕ್ಷಕ ಆನಂದ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಶ್ರೀ ವಿನಯ ಗುರೂಜಿ ಅವರನ್ನು ಮೆರವಣಿಯ ಮೂಲಕ ಶ್ರೀ ಸೇನೇಶ್ವರ ದೇವಸ್ಥಾನದಿಂದ ಶಾಲೆಯ ತನಕ ಕರೆತರಲಾಯಿತು. ಮೆರವಣಿಗೆಯಲ್ಲಿ ಮಹಿಳೆಯರ ಚಂಡೆವಾದನ, ಭಜನಾ ನೃತ್ಯ, ವಿವಿಧ ಬ್ಯಾಂಡ್ ಸೆಟ್‌ಗಳು, ಕೀಲುಕುದುರೆ ಮೊದಲಾದವುಗಳು ಆಕರ್ಷಣೀಯವಾಗಿದ್ದವು.