Kundapra.com ಕುಂದಾಪ್ರ ಡಾಟ್ ಕಾಂ

ಮಕ್ಕಳು ಚಿಂತನೆಯಿಲ್ಲದ, ಅಂಕ ಗಳಿಕೆಯ ಮೆಷಿನ್‌ಗಳಾಗುತ್ತಿದ್ದಾರೆ ವಿಜಯಲಕ್ಷ್ಮೀ ಶಿಬರೂರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಚಿಂತನೆ ಹಾಗೂ ವಿವೇಚನೆ ಇಲ್ಲದೇ ಉಪದೇಶಗಳನ್ನು ಅನುಸರಿಸಿ ನಡೆಯುವ ಮಕ್ಕಳು ಸಮಾಜ ಘಾತುಕ ಶಕ್ತಿಗಳಾಗಿ ಬೆಳೆಯುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ಅಂಕ ಗಳಿಕೆಯ ಮೆಷಿನ್‌ಗಳನ್ನಾಗಿ ನೋಡುವ ಪ್ರವೃತ್ತಿ ಹೆಚ್ಚುತ್ತಿದ್ದು, ಬದುಕನ್ನು ಎದುರಿಸಲಾಗದ ಹೇಡಿಗಳನ್ನಾಗಿ ರೂಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಕಳವಳ ವ್ಯಕ್ತಪಡಿಸಿದರು.

ಅವರು ಶನಿವಾರ ಬೈಂದೂರು ರತ್ತೂಬಾಯಿ ಜನತಾ ಪ್ರೌಢಶಾಲೆಯ ಸುವರ್ಣ ಸಂಭ್ರಮ ಕಾರ್ಯಕ್ರಮದ ಸಮಾರೋಪದಲ್ಲಿ ಪ್ರಧಾನ ಭಾಷಣ ಮಾಡಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದಲ್ಲಿಯೇ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಮಾಡಿಕೊಡಬೇಕು. ಮೊಬೈಲ್ ಆಪರೇಟ್ ಮಾಡುವ ಮಗುವು ಅದರಲ್ಲಿ ಏನು ನೋಡುತ್ತಿದೆ ಎಂಬುದರ ಅರಿವು, ತಮ್ಮ ಮಗುವಿನ ವಿಕಾಸಕ್ಕೆ ಪೂರಕವಾದ ವಾತಾರವಣ ನಿರ್ಮಿಸುವ ಜವಾಬ್ದಾರಿ ಎರಡೂ ಪೋಷಕರ ಮೇಲಿದೆ. ಮೊಬೈಲ್ ಹಾಗೂ ಟಿ.ವಿ ಧಾರಾವಾಹಿಗಳ ಅಡಿಕ್ಷನ್‌ಗಳಿಂದ ಅಂತರ ಕಾಯ್ದುಕೊಂಡರೆ ಬಹುಪಾಲು ಸುಧಾರಣೆ ಸಾಧ್ಯವಾಗುತ್ತದೆ ಎಂದರು.

ರತ್ತೂಬಾಯಿ ಜನತಾ ಪ್ರೌಢಶಾಲೆಯ ಇತಿಹಾಸವನ್ನು ಅವಲೋಕಿಸಿದಾಗ ಆರಂಭದಲ್ಲಿ ಮಹಿಳೆ ಸಶಕ್ತೀಕರಣ ಹಾಗೂ ಬದುಕಿನ ಎಲ್ಲಾ ಆಯಾಮದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ತಿಳಿಯುತ್ತದೆ. ಈ ಬದುಕಿನ ಶಿಕ್ಷಣ ಇಂದು ಅಗತ್ಯವಾದುದು ಎಂದರು.

ಸುವರ್ಣ ಸಂಭ್ರಮ ಸ್ಮರಣ ಸಂಚಿಕೆ ಅನಾವರಣಗೊಳಿಸಿದ ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಮಾತನಾಡಿ ಇಂಗ್ಲಿಷ್ ಮಾಧ್ಯಮದ ಪ್ರಭಾವದಿಂದಾಗಿ ಕನ್ನಡ ಮಾಧ್ಯಮ ಹಾಗೂ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಗ್ರಾಮದ ಶಾಲೆಗಳನ್ನು ಮುಚ್ಚುವ ಆಂತಕ ಎದುರಾಗಿದೆ. ಸರಕಾರಗಳು ಪೋಷಕರ ಭಾವನೆಗೆ ತಕ್ಕಂತೆ ಸ್ಪಂದಿಸದೇ ಇದ್ದುದೇ ಇಂತಹ ಸ್ಥಿತಿಗೆ ಪ್ರಮುಖ ಕಾರಣ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.

ಶಾಲೆಗೆ ದೇಣಿಗೆ ನೀಡಿದ ದಾನಿಗಳನ್ನು ಹಾಗೂ ಶಾಲಾ ಅಧ್ಯಾಪಕ, ಅಧ್ಯಾಪಕೇತರ ವೃಂದದವರನ್ನು ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶ್ರೀ ವಿ.ವಿ.ವಿ ಮಂಡಳಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ ಬಟವಾಡಿ, ತಾಲೂಕು ಪಂಚಾಯತ್ ಸದಸ್ಯೆ ಮಾಲಿನಿ ಕೆ., ಉದ್ಯಮಿ ಕೊತ್ವಾಲ್ ಪದ್ಮನಾಭ ಶೇರೆಗಾರ್, ಮಂಗಳೂರು ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಹೆಮ್ಮಾಡಿ ಜನತಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಿ. ಮೋಹನದಾಸ್ ಶೆಟ್ಟಿ, ಬೈಂದೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಅಬ್ದುಲ್ ರವೂಫ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಾಗರತ್ನ, ಕಾರ್ಯದರ್ಶಿ ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು.

ಸುವರ್ಣ ಸಂಭ್ರಮ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿದರು. ಶಿಕ್ಷಕ ಆನಂದ ಮದ್ದೋಡಿ ವಂದಿಸಿದರು. ಶಿಕ್ಷಕ ಚಂದ್ರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Exit mobile version