ಕುಂದಾಪ್ರ ಡಾಟ್ ಕಾಂ’ ಸುದ್ದಿ
ಕುಂದಾಪುರ: ಚಲನಚಿತ್ರ ರಂಗಕ್ಕೆ ರಂಗಭೂಮಿಯ ಕೊಡುಗೆ ಅಪಾರ ರಂಗಭೂಮಿಯಲ್ಲಿ ನುರಿತವರು ಚಿತ್ರರಂಗದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಇಂದಿಗೂ ಈ ನಂಟು ಮುಂದುವರೆದಿದೆ. ಈ ಸಂಬಂಧ ಗಟ್ಟಿಗೊಳಿಸಿದ್ದ ಡಾ. ಬಿ.ವಿ. ಕಾರಂತರು ಹಾಗೂ ಡಾ. ಗಿರೀಶ್ ಕಾರ್ನಡ್ ಎಂದೂ ಟಿವಿ ಹಾಗೂ ಸಿನಿಮಾ ರಂಗಗಳನ್ನು ದ್ವೇಷಿಸಿರಲಿಲ್ಲ ಎಂದು ನಟ ಮಂಡ್ಯ ರಮೇಶ್ ಹೇಳಿದರು.
ಎಸ್.ವಿ. ಫಿಲ್ಮ್ ಪ್ರೊಡಕ್ಷನ್ ಅವರು ಚೊಚ್ಚಲ ಕಾಣಿಕೆ ‘ಮಾಡರ್ನ್ ಮಹಾಭಾರತ’ ಕನ್ನಡ ಚಲನಚಿತ್ರದ ಟೀಸರ್ ಅನ್ನು ಉಡುಪಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಚಿತ್ರರಂಗದಲ್ಲಿ ಇಂದು ಪ್ರಾದೇಶಿಕ ಭಾಷೆಗಳಿಗೆ ಮಹತ್ವ ಬರುತ್ತಿದೆ. ಉತ್ತರ ಕರ್ನಾಟಕದಿಂದ ಹೆಚ್ಚಿನ ನಾಟಕ ಕಂಪನಿಗಳು ಆ ಭಾಗದ ಭಾಷೆ ಸೊಗಡನ್ನು ದಕ್ಷಿಣದವರಿಗೆ ಪರಿಚಯಿಸಿದ್ದವು. ಈ ಪರಂಪರೆ ಚಿತ್ರರಂಗದಲ್ಲಿ ಮುಂದುವರೆದಿದೆ. ಪ್ರಾದೇಶಿಕ ಭಾಷೆಯಾಗಿ ಅತ್ಯಂತ ಶಕ್ತಿಯುತವಾದ ಕುಂದಾಪ್ರ ಕನ್ನಡ ಸಿನಿಮಾಗಳಿಂದಾಗಿ ಚಿತ್ರಗಳಿಂದಾಗಿ ಇಂದು ವಿಶ್ವ ಮಟ್ಟದಲ್ಲಿ ಮನ್ನಣೆಗಳಿಸಿದೆ ಎಂದರು.
ಚಿತ್ರದ ನಿರ್ದೇಶಕ ಶ್ರೀಧರ ಉಡುಪ ಕೋಟೇಶ್ವರ ಸ್ವಾಗತಿಸಿ ಚಿತ್ರದ ಬಗ್ಗೆ ಮಾಹಿತಿ ನೀಡಿದರು. ರಂಗಕರ್ಮಿ ಶಶಿಕಾಂತ ಎಡಹಳ್ಳಿ ಶುಭಹಾರೈಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಬ್ರಹ್ಮಾವರ ತಾಲ್ಲೂಕು ಕಸಾಪ ಅಧ್ಯಕ್ಷ ನಾರಾಯಣ ಮಡಿ, ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು , ನಿರ್ಮಾಪಕ ಡಾ. ರಾಮಕೃಷ್ಣ ಉಡುಪ, ಪತ್ರಕರ್ತೆ ಸಂಧ್ಯಾ ಶೆಣೈ, ನರಸಿಂಹಮೂರ್ತಿ, ಪತ್ರಕರ್ತ ಕೆ.ಜಿ.ವೈದ್ಯ ಹಾಗೂ ರವಿರಾಜ್ ಎಚ್.ಪಿ ಇದ್ದರು.
ಮೂರು ಸಂಸಾರಗಳ ಏರಿಳತದ ಕಥೆಯನ್ನು ಹೊಂದಿ, ನವೀರಾದ ಹಾಸ್ಯ ಹೊಂದಿರುವ ಮಾಡರ್ನ್ ಮಹಾಭಾರತ ಶೀಘ್ರದಲ್ಲಿ ತೆರೆಗೆ ಬರಲಿದೆ. ಶ್ರೀಧರ ಉಡುಪ ಕೋಟೇಶ್ವರ ನಿರ್ದೇಶನ ನೀಡಿದ್ದಾರೆ.
ಡೇನಿಯಲ್ ಮತ್ತು ಸುಹಿತ್ ಜೋಡಿ ಇಂಪಾದ ಸಂಗೀತವಿದೆ. ಶಿವಶಂಕರ ನಿನಾಸಂ ಕಲಾ ನಿರ್ದೇಶನ ಹಾಗೂ ಉಮೇಶ್ ಎ.ಬಿ ಸಂಕಲನ ಚಿತ್ರದಲ್ಲಿ ನಟ ಮಂಜುನಾಥ ಹೆಗಡೆ ನಾಯಕ ಪಾತ್ರದಲ್ಲಿದ್ದಾರೆ.

