Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ & ಬೈಂದೂರು: ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳ ಮುಷ್ಕರ

ಕುಂದಾಪ್ರ ಡಾಟ್ ಕಾಂ’ ಸುದ್ದಿ
ಬೈಂದೂರು: ಸರ್ಕಾರಗಳ ತಪ್ಪು ನೀತಿಗಳ ಫಲವಾಗಿ ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದೆ. ಇನ್ನೊಂದೆಡೆ ಕಾರ್ಮಿಕ ಕಾನೂನುಗಳ ತಿದ್ದುಪಡಿಯ ಮೂಲಕ ದುಡಿವ ಜನರ ಸೌಲಭ್ಯ ಕಸಿಯಲಾಗುತ್ತಿದೆ. ವಿರೋಧಿಸಿ ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಧುರೀಣ ವೆಂಕಟೇಶ ಕೋಣಿ ಹೇಳಿದರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆಯಂತೆ ಬೈಂದೂರು ತಾಲ್ಲೂಕು ಸಮಿತಿ ಆಶ್ರಯದಲ್ಲಿ ಬುಧವಾರ ನಡೆದ ಮುಷ್ಕರದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸಕ್ತ ಕೇಂದ್ರ ಸರ್ಕಾರದ ದುರಾಡಳಿತದ ಫಲವಾಗಿ ಜಿಡಿಪಿ ಕುಸಿಯುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ. ಜನರ ಆದಾಯ ಇಳಿಮುಖ ವಾಗುತ್ತಿರುವ ಕಾರಣ ಬಡತನ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಅವರು ದೂರಿದರು.

ಆರ್ಥಿಕ ಸಂಕಷ್ಟದಿಂದ ತೊಂದರೆ ಗೊಳಗಾಗಿರುವ ಕಾರ್ಮಿಕರ ಹಿತಕಾಯಬೇಕಾದ ಸರ್ಕಾರ ಬಂಡವಾಳದಾರರ ರಕ್ಷಣೆಗೆ ನಿಂತಿದೆ. ಅದು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರದ ನೀತಿಯನ್ನು ವಿರೋಧಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ಎಲ್ಲ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ 18 ಬಾರಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗಿದೆ. ಇದು ಅಂತಹ 19 ನೆಯ ಮುಷ್ಕರ. ಇನ್ನಾದರೂ ಸರ್ಕಾರ ಎಚ್ಚತ್ತುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಶ್ರೀಧರ ಉಪ್ಪುಂದ ವಂದಿಸಿದರು. ಇಲ್ಲಿನ ಸಿಐಟಿಯು ಕಚೇರಿಯಿಂದ ಯಡ್ತರೆ, ಪೇಟೆ ಮಾರ್ಗವಾಗಿ ರ್‍ಯಾಲಿ ನಡೆಸಿ, ಬೈಂದೂರು ಹೆದ್ದಾರಿ ಅಂಡರ್‌ಪಾಸ್ ಬಳಿ ಸೇರಿದರು.

ಉದಯ ಗಾಣಿಗ ಮೊಗೇರಿ, ಮಂಜು ಪಡುವರಿ, ರೋನಿ ಪಡುವರಿ, ನಾಗರತ್ನಾ ಪಡುವರಿ, ಜ್ಯೋತಿ ಉಪ್ಪುಂದ, ಸುಮತಿ ಬೈಂದೂರು, ರಾಮ ಖಂಬದಕೋಣೆ, ಜಯಶ್ರೀ ಉಪ್ಪುಂದ ಮುಷ್ಕರದ ನೇತೃತ್ವ ವಹಿಸಿದ್ದರು. ಸಿಪಿಐ ಸುರೇಶ ನಾಯಕ್ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.

ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್‌ ಬಳಿಯಲ್ಲಿ ಬುಧವಾರ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಡೆಸಿದ ಅಖಿಲ ಭಾರತ ಮುಷ್ಕರದ ಅಂಗವಾಗಿ ನಡೆದ ಬಹಿರಂಗ ಪ್ರತಿಭಟನಾ ಸಭೆ ನಡೆಯಿತು.

ಈ ಸಂದರ್ಭ ಸಿಐಟಿಯು ಜಿಲ್ಲಾ ಸಮಿತಿ ಕಾರ್ಯದರ್ಶಿ ಸುರೇಶ್‌ ಕಲ್ಲಾಗಾರ್‌ ಮಾತನಾಡಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ನೇತೃತ್ವದ ಸರ್ಕಾರ ಕೆಲ ಬಂಡವಾಳಶಾಹಿಗಳ ಪರ ಇರುವ ಸರ್ಕಾರ. ಕಾರ್ಮಿಕರಿಗೆ ₹ 4,628 ಕನಿಷ್ಠ ಕೂಲಿ ನಿಗದಿ ಮಾಡುವ ಮೂಲಕ ಕಾರ್ಮಿಕ ವಿರೋಧಿ ಸರ್ಕಾರ ಎನ್ನುವುದನ್ನು ಸಾಬೀತು ಮಾಡಿದೆ ಎಂದು ಆರೋಪಿಸಿದರು.

19 ವರ್ಷಗಳಿಂದ ಕಾರ್ಮಿಕ ವರ್ಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕಾರ್ಮಿಕ ಸಂಘಟನೆಗಳು ಹೋರಾಟವನ್ನು ನಡೆಸುತ್ತಾ ಬಂದಿದ್ದರೂ, ಸಮಸ್ಯೆಗಳು ಸಂಪೂರ್ಣವಾಗಿ ಬಗೆಹರಿದಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಅವರು ಕಾರ್ಮಿಕರ ಬಗ್ಗೆ ಹಗುರವಾಗಿ ಮಾತನಾಡುವುದು ಖಂಡನೀಯ. ಅವರಿಗೆ ಕಾರ್ಮಿಕರ ವಿರುದ್ಧ ಅಸಹನೆ ಯಾಕೆ ಎನ್ನುವುದು ತಿಳಿಯುತ್ತಿಲ್ಲ ಎಂದು ಅವರು ಆಕ್ರೋಶ ಹೊರ ಹಾಕಿದರು.

4 ವರ್ಷಗಳಿಂದ ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ನೀಡದೆ ಕಾರ್ಮಿಕರ ಹಾಗೂ ಅವರ ಕುಟುಂಬದ ಹೊಟ್ಟೆ ಮೇಲೆ ಹೊಡೆದಿರುವುದನ್ನು ಕಾರ್ಮಿಕರು ಕ್ಷಮಿಸುವುದಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ನಿಮ್ಮದೆ ಸರ್ಕಾರವಿದ್ದರೂ ಶಾಸ್ತ್ರಿ ಸರ್ಕಲ್‌ನ ಫ್ಲೈ ಓವರ್‌ ಕಾಮಗಾರಿ ಮುಗಿಸದೆ ಇರುವುದು ಅವರ ಅಸಮರ್ಥತೆಗೆ ಸ್ವಷ್ಟ ನಿದರ್ಶನ. ಕಾರ್ಮಿಕ ಸುಧಾರಣೆ ಹೆಸರಿನಲ್ಲಿ ಜಾರಿಗೆ ತಂದಿರುವ ಎಲ್ಲ ಕಾನೂನುಗಳು, ಜನ ಮರಳು ಮಾಡುವ ಭದ್ರತೆ ಒದಗಿಸದ ಬೋಗಸ್‌ ಕಾನೂನುಗಳು ಎಂದು ದೂರಿದರು.

ಸಭೆಯಲ್ಲಿ ಮಾತನಾಡಿದ ಇಂಟಕ್‌ ಸಂಘಟನೆಯ ಮುಖಂಡ ಲಕ್ಷಣ ಶೆಟ್ಟಿ, ಸರ್ಕಾರದ ನೀತಿಗಳ ವಿರುದ್ಧ ಕಾರ್ಮಿಕ ವರ್ಗದ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟವನ್ನು ಜೆಸಿಟಿಯು ಸಂಘಟನೆ ಅಡಿಯಲ್ಲಿ ಐಕ್ಯತೆಯಿಂದ ಮುನ್ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.

ಸಿಐಟಿಯು ತಾಲ್ಲೂಕು ಸಂಘಟನೆ ಮುಖಂಡ ಎಚ್‌.ನರಸಿಂಹ ಅವರು, ದೇಶದ ಸಾರ್ವಜನಿಕ ಸಂಸ್ಥೆಗಳಾದ ರೈಲು, ಬ್ಯಾಂಕ್‌, ವಿಮಾ ಸಂಸ್ಥೆಗಳನ್ನು ಖಾಸಗಿ ಬಂಡವಾಳಶಾಹಿ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಸ್ಕೀಂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸದೆ ಗುಲಾಮರಂತೆ ದುಡಿಸಿಕೊಳ್ಳಲಾಗುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ದೊರಕುತ್ತಿಲ್ಲ. ಕೇಂದ್ರದ ನೀತಿಗಳಿಂದಾಗಿ ಉದ್ಯೋಗಗಳು ನಷ್ಟವಾಗುತ್ತಿದೆ. ದೇಶದ ಜ್ವಲಂತ ಸಮಸ್ಯೆಗಳ ಕುರಿತು ಮಾತನಾಡದ ಪ್ರಧಾನಿ ನರೇಂದ್ರ ಮೋದಿ, ಜನರ ದಾರಿ ತಪ್ಪಿಸಿ ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ವಿವಿಧ ಕಾರ್ಮಿಕ ಸಂಘಟನೆ ಮುಖಂಡರಾದ ಮಾಣಿ ಉದಯ್‌, ರಾಜು ದೇವಾಡಿಗ, ಮಹಾಬಲ ವಡೇರಹೋಬಳಿ, ರವಿ ವಿ ಎಂ ಇದ್ದರು.

ಬುಧವಾರ ನಡೆದ ಅಖಿಲ ಭಾರತ ಮುಷ್ಕರದ ಅಂಗವಾಗಿ ಗಂಗೊಳ್ಳಿ, ತಲ್ಲೂರು, ಅಮಾಸೆಬೈಲು, ವಂಡ್ಸೆ, ಕಂಡ್ಲೂರು, ಅಂಪಾರು, ಹಾಲಾಡಿ, ಬಿದ್ಕಲ್‌ಕಟ್ಟೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ಕಾರ್ಮಿಕರು ಕೇಂದ್ರದ ನೀತಿಗಳ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

Exit mobile version