Kundapra.com ಕುಂದಾಪ್ರ ಡಾಟ್ ಕಾಂ

ಭಂಡಾರ್ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘಕ್ಕೆ ಹೊಸರೂಪ ನೀಡಲು ಯೋಜನೆ

ಕುಂದಾಪ್ರ ಡಾಟ್ ಕಾಂ ಸುದಿ.
ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವನ್ನು ಇನ್ನಷ್ಟು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಲಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳ ನಿರಂತರ ಸಂಪರ್ಕದಲ್ಲಿರುವ ಉದ್ದೇಶದಿಂದ ವ್ಯವಸ್ಥಿತವಾಗಿ, ನಿಯಮಾವಳಿಗಳ ಅನುಸಾರ ಹಳೆ ವಿದ್ಯಾರ್ಥಿ ಸಂಘಕ್ಕೆ ಹೊಸ ರೂಪದೊಂದಿಗೆ ಸಕ್ರಿಯಗೊಳಿಸುವ ಯೋಜನೆ ರೂಪಿಸಲಾಗಿದೆ ಎಂದು ಭಂಡಾರ್ಕಾಸ್ ಕಾಲೇಜಿನ ಪ್ರಾಂಶುಪಾಲ ಡಾ| ಎನ್. ಪಿ. ನಾರಾಯಣ ಶೆಟ್ಟಿ ಹೇಳಿದರು.

ಅವರು ಕಾಲೇಜಿನಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕಾಲೇಜಿನಲ್ಲಿ 1967ರಲ್ಲಿಯೇ ಹಳೆ ವಿದ್ಯಾರ್ಥಿ ಆರಂಭಗೊಂಡಿದ್ದರೂ ಕೂಡಾ ಕೆಲವು ಕಾರಣಾಂತರಗಳಿಂದ ಸ್ಥಗಿತಗೊಂಡಿತು. ಆ ನಂತರ ಪುನಃ ಅದಕ್ಕೆ ಆಗಿನ ಪ್ರಾಂಶುಪಾಲರಾಗಿದ್ದ ಡಾ|ಹೆಚ್.ಶಾಂತಾರಾಮ್ ಅವರು ಚಾಲನೆ ನೀಡಿದ್ದರು. ಮತ್ತೆ 1976ರಲ್ಲಿ ಕಾಮರ್ಸ್ ವಿಭಾಗದ ಮುಖ್ಯಸ್ಥರಾಗಿದ್ದ ಮೋಹನದಾಸ ಪೈ ಮತ್ತು ಡಾ|ರಾಮಮೋಹನ ಅವರ ಸಮರ್ಥ ನೇತೃತ್ವದಲ್ಲಿ ಸಕ್ರಿಯವಾಯಿತು. ಆನೇಕ ಮಂದಿ ಅಜೀವ ಸದಸ್ಯರನ್ನು ಒಟ್ಟು ಮಾಡಿ ಒಂದು ನಿಧಿಯನ್ನು ಸ್ಥಾಪಿಸಲಾಯಿತು. ಕಾಲ ಕ್ರಮೇಣ ಕಾಲೇಜಿನಲ್ಲಿ ಓದು ಮುಗಿಸಿ ಬಿಟ್ಟು ಹೋಗುವ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಹಳೆ ವಿದ್ಯಾರ್ಥಿ ಸಂಘದ ಸದಸ್ಯರನ್ನಾಗಿ ಮಾಡುವ ಪರಿಪಾಠವನ್ನು ಇಟ್ಟುಕೊಳ್ಳಲಾಯಿತು ಎಂದರು. ಕುಂದಾಪ್ರ ಡಾಟ್ ಕಾಂ ಸುದಿ.

ಈ ವರ್ಷದಿಂದ ಕಾಲೇಜಿನ ಆಡಳಿತ ಮಂಡಳಿಯ ಮೂಲಕ ರಾಷ್ಟ್ರೀಯ ಮೌಲ್ಯಂಕನ ಸಮಿತಿಯ ನಿರ್ದೇಶನದಂತೆ ಒಂದು ನೋಂದಾಯಿತ ಹಳೆ ವಿದ್ಯಾರ್ಥಿ ಸಂಘವನ್ನು ಆರಂಭಿಸುತ್ತಿದ್ದೇವೆ. ಕಾಲೇಜಿನಿಂದ ಕಲಿತು ಹೋದಂತಹ ಸಾವಿರಾರು ವಿದ್ಯಾರ್ಥಿಗಳು ಪ್ರಪಂಚದೆಲ್ಲೆಡೆ, ದೇಶದೆಲ್ಲಡೆ ವಿವಿಧ ಹುದ್ದೆಗಳಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೆಲ್ಲರನ್ನು ಒಟ್ಟುಗೂಡಿಸುವ ಪರಿಪೂರ್ಣ ಪ್ರಯತ್ನವೂ ಇದಾಗಿದೆ ಎಂದರು.

ನೊಂದಾಯಿತ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಿಗೆ ಐಡಿ ನೀಡಲಾಗುತ್ತದೆ. ಇದರ ಮೂಲಕ ಅವರು ಕಾಲೇಜಿನೊಂದಿಗೆ ನೇರ ಸಂವಹನ ಮಾಡಬಹುದಾಗಿದೆ. ವ್ಯವಸ್ಥಿತವಾಗಿ ಪುನರುಜ್ಜೀವಗೊಳ್ಳುವ ಸಂಘವು ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸುವುದು, ಪಾರದರ್ಶಕತೆ ಕಾಪಾಡುವುದು, ನಿರಂತರವಾಗಿ ಹಳೆ ವಿದ್ಯಾರ್ಥಿಳೊಂದಿಗೆ ಸಂಪರ್ಕ ಸಾಧಿಸುವುದು ಸಂಘದ ಉದ್ದೇಶವಾಗಿದೆ ಎಂದರು.

ಹಳೆ ವಿದ್ಯಾರ್ಥಿಗಳು ಸಂಘದಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಅನ್‌ಲೈನ್ ಮೂಲಕ ಸದಸ್ಯತ್ವವನ್ನು ಪಡೆದುಕೊಳ್ಳಬಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ವೆಬ್‌ಸೈಟ್ www.basck.org  ಮೂಲಕ ತಿಳಿದುಕೊಳ್ಳಬಹುದು. ದೂರವಾಣಿ ಸಂಖ್ಯೆ 08254-230369, 230469ನ್ನು ಸಂಪರ್ಕಿಸಬಹುದು ಎಂದರು.

ನೂತನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಪ್ರಾಧ್ಯಾಪಕ ಸತ್ಯನಾರಾಯಣ ಮಾತನಾಡಿ, ಫೆಬ್ರವರಿ 2ರಂದು ಹಳೆ ವಿದ್ಯಾರ್ಥಿಗಳ ಸಮಾವೇಶ ನಡೆಸಲಾಗುವುದು. ಇದರಲ್ಲಿ ಎಲ್ಲಾ ಹಳೆವಿದ್ಯಾರ್ಥಿಗಳು ಭಾಗವಹಿಸಬಹುದು. ಆ ದಿನ ಸಂಘಕ್ಕೆ ಸದಸ್ಯರಾಗಬಯಸುವವರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದಿ.

ಸುದ್ಧಿಗೋಷ್ಠಿಯಲ್ಲಿ ಪ.ಪೂ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡ, ಕಾರ್ಯದರ್ಶಿ, ಉಪನ್ಯಾಸಕ ಪ್ರಶಾಂತ್ ಹೆಗಡೆ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ಉಪಸ್ಥಿತರಿದ್ದರು.

 

 

Exit mobile version