Kundapra.com ಕುಂದಾಪ್ರ ಡಾಟ್ ಕಾಂ

ರಸ್ತೆ ಬಾಳಿಕೆ ಹೆಚ್ಚಿಸಲು ಟಾರ್ ಜೊತೆಗೆ ಪ್ಲಾಸ್ಟಿಕ್ ಬಳಕೆ ಪ್ರಯೋಗ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಟಾರ್ ರಸ್ತೆಯ ಬಾಳಿಕೆ ಹೆಚ್ಚಿಸಲು ಟಾರ್‌ಗೆ ಪ್ಲಾಸ್ಟಿಕ್ ಹುಡಿ ಸೇರಿಸುವ ಕೆರಳ ಮಾದರಿಯ ಪ್ರಯೋಗ ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಈಚೆಗೆ ಅಲ್ಲಿನ 160 ಮೀಟರ್ ಉದ್ದದ ರಸ್ತೆಗೆ ಟಾರ್ ಹಾಕುವಾಗ ಈ ಪ್ರಯೋಗ ನಡೆಸಲಾಗಿದೆ.

ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಟಾರ್ ರಸ್ತೆಯ ಮೇಲ್ಮೈ ಸವಕಳಿಯಾಗಿ, ಎರಡು, ಮೂರು ವರ್ಷಗಳಲ್ಲಿ ಕಿತ್ತುಹೋಗಿ ಗುಂಡಿಗಳು ಬೀಳುತ್ತವೆ. ಕೇರಳದಲ್ಲಿ ಟಾರ್‌ಗೆ ಪ್ಲಾಸ್ಟಿಕ್ ಸೇರಿಸಿ ರಸ್ತೆ ನಿರ್ಮಿಸುವ ಪ್ರಯೋಗ ನಡೆದಿದ್ದು, ಅದು ಯಶಸ್ವಿಯಾಗಿದೆ ಎನ್ನಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಅಲ್ಲಿ ಈ ಪ್ರಯೋಗ ನಡೆಸಿ ಯಶಸ್ಸು ಕಂಡ ಸ್ವಾಮಿನಾಥನ್ ಎಂಬವರನ್ನು ಈಚೆಗೆ ಉಡುಪಿಗೆ ಕರೆಸಿ ಜಿಲ್ಲೆಯ ಎಂಜಿನಿಯರ್‌ಗಳಿಗೆ ತರಬೇತಿ ನೀಡಲಾಗಿತ್ತು. ಉಡುಪಿಯ ಅಲೆವೂರು ಗ್ರಾಮ ಪಂಚಾಯಿತಿ ಈ ಕ್ರಮವನ್ನು ಅನುಸರಿಸಿ ಮೊದಲಾಗಿ ರಸ್ತೆ ನಿರ್ಮಿಸಿತ್ತು. ಅದರಿಂದ ಪ್ರೇರಿತವಾದ ಮರವಂತೆ ಗ್ರಾಮ ಪಂಚಾಯಿತಿ ಹೆಚ್ಚು ಮಳೆನೀರಿನ ಬಾಧೆಗೆ ಒಳಗಾಗುವ ಊರಿನ ಒಂದು ರಸ್ತೆಯಲ್ಲಿ ಅದನ್ನು ಮಾಡಿದೆ. ಅಲೆವೂರಿನಲ್ಲಿ ಬಳಸಿ ಉಳಿದಿದ್ದ ಪ್ಲಾಸ್ಟಿಕ್ ಹುಡಿಯನ್ನು ತರಿಸಿಕೊಂಡು ಹತ್ತು ಕೆಜಿ ಟಾರ್‌ಗೆ ಒಂದು ಕೆಜಿ ಪ್ಲಾಸ್ಟಿಕ್ ಹುಡಿ ಬೆರೆಸಿ, ಕುದಿಸಿ ಮಾಡಿದ ಜಲ್ಲಿ-ಟಾರ್ ಮಿಶ್ರಣವನ್ನು ಇಲ್ಲಿ ಬಳಸಲಾಗಿದೆ.

ಕಾಮಗಾರಿ ನಡೆಯುವ ವೇಳೆ ಅಧ್ಯಕ್ಷೆ ಅನಿತಾ ಆರ್. ಕೆ, ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮದ್, ಕರಸಂಗ್ರಾಹಕ ಶೇಖರ ಮರವಂತೆ, ಗುತ್ತಿಗೆದಾರ ಚಂದ್ರ ಖಾರ್ವಿ ಇದ್ದರು.

ಈ ಕ್ರಮದಿಂದ ರಸ್ತೆ 10 ವರ್ಷ ಬಾಳಿಕೆ ಬರುತ್ತದೆ ಎನ್ನಲಾಗಿದ್ದು, ಮಳೆಗಾಲದ ಬಳಿಕ ಮರವಂತೆ ರಸ್ತೆಯ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಆಗದಿದ್ದರೆ ಪ್ರಯೋಗ ಯಶಸ್ವಿ ಎಂದು ಭಾವಿಸಬಹುದು. ಇದನ್ನು ಎಲ್ಲೆಡೆ ಧೈರ್ಯದಿಂದ ಅನುಸರಿಸಬಹುದು ಎಂದರು. – ಶ್ರೀಕಾಂತ್, ಕಿರಿಯ ಎಂಜಿನಿಯರ್, ಜಿಲ್ಲಾ ಪಂಚಾಯಿತಿ, ಉಡುಪಿ

Exit mobile version