Kundapra.com ಕುಂದಾಪ್ರ ಡಾಟ್ ಕಾಂ

ಕಿರಿಮಂಜೇಶ್ವರ: ಚಾಲಕ ರಾಮ ಪೂಜಾರಿ ಸಾವು – ಪೊಲೀಸರ ಕಿರುಕುಳ ಆರೋಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜ.21: ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕಳ್ಳಂಗಡಿ ಸಮೀಪದ ರೈಲ್ವೆ ಟ್ರ್ಯಾಕ್‌ನಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತನನ್ನು ಕಿರಿಮಂಜೇಶ್ವರ ಸಮೀಪದ ಶಾಲೆಬಾಗಿಲು ರಸ್ತೆ ನಿವಾಸಿ ರಾಮ ಪೂಜಾರಿ (32) ಎಂದು ಗುರುತಿಸಲಾಗಿದೆ. ಈ ಪ್ರಕರಣದ ಪೂರ್ವದಲ್ಲಿ ಪೊಲೀಸರ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದ್ದು, ಕುಟುಂಬಿಕರು ಶವವನ್ನು ರೈಲ್ವೆ ಹಳಿಯ ಪಕ್ಕಕ್ಕಿಟ್ಟು ಮಧ್ಯಾಹ್ನದ ತನಕವೂ ಪ್ರತಿಭಟಿಸಿದ ಘಟನೆಯೂ ನಡೆಯಿತು.

ಘಟನೆಯ ವಿವರ:
ಚಾಲಕ ವೃತ್ತಿ ಮಾಡಿಕೊಂಡಿರುವ ರಾಮ ಪೂಜಾರಿಯನ್ನು ಸೋಮವಾರ ಮಧ್ಯಾಹ್ನ 3:30ರ ಸುಮಾರಿಗೆ ಪೊಲೀಸರು ಗಂಗೊಳ್ಳಿ ಠಾಣೆಗೆ ಕರೆದೊಯ್ದಿದ್ದರು. ಈ ಬಗ್ಗೆ ಅವರ ಸ್ನೇಹಿತರು ವಿಚಾರಿಸಿದಾಗ, ರಾಮ ಪೂಜಾರಿ ವಿರುದ್ಧ ಯುವತಿಯೊಬ್ಬಳು ದೂರು ನೀಡಿದ್ದು, ಅದರ ವಿಚಾರಣೆಗೆ ಕರೆದೊಯ್ಯುತ್ತಿದ್ದೇವೆ ಎಂದು ಹೇಳಿದ್ದರು ಎನ್ನಲಾಗಿದೆ. ವಿಚಾರಣೆಯ ಬಳಿಕ ರಾತ್ರಿ ರಾಮ ಪೂಜಾರಿ ಮನೆಗೆ ಮರಳಿದ್ದು, ಸೋಮವಾರ ಬೆಳಿಗ್ಗೆ ನಾಗೂರು ಸಮೀಪದ ರೈಲ್ವೇ ಟ್ರ್ಯಾಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಅವರ ಛಿದ್ರಗೊಂಡ ದೇಹ ಪತ್ತೆಯಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಪೊಲೀಸರ ವಿರುದ್ದ ಕುಟುಂಬಿಕರ ಆರೋಪ:
ರಾಮ ಪೂಜಾರಿ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಕುಟುಂಬಿಕರು, ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಸೋಮವಾರ ಮಧ್ಯಾಹ್ನ ಕರೆದೊಯ್ದು ಸಂಜೆಯಾದರೂ ಮನೆಗೆ ಬಾರದೇ ಇದ್ದಾಗ ಆತನ ಸಂಬಂಧಿ ಗಂಗೊಳ್ಳಿ ಠಾಣೆಗೆ ತೆರಳಿದ್ದಾರೆ. ಅಲ್ಲಿ ಪೊಲೀಸರು ಸರಿಯಾಗಿ ಪ್ರತಿಕ್ರಿಯಿಸದೇ ಇದ್ದಾಗ ಮನೆಯವರು ಹಿಂತಿರುಗಿದ್ದಾರೆ. ರಾತ್ರಿ ಗಂಗೊಳ್ಳಿ ಠಾಣೆಯಿಂದ ರಾಮ ಪೂಜಾರಿಯನ್ನು ಕರೆದುಕೊಂಡು ಹೋಗಿ ಎಂದು ಕರೆ ಮಾಡಿದ್ದು, ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಮನೆಗೆ ಕಳಿಸಿದ್ದರು. ಠಾಣೆಯಲ್ಲಿ ರಾಮ ಪೂಜಾರಿಗೆ ಹಲ್ಲೆ ನಡೆಸಿದ್ದು, ಕೈಕಾಲು ಮುಖ ಊದಿಕೊಂಡಿತ್ತು. ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಮನೆಯವರು ಕರೆತರಲು ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಕುಟುಂಬಿಕರು ಆರೋಪಿಸಿದ್ದಾರೆ.

ಕಿರುಕುಳ ನೀಡಿಲ್ಲ ಎಂದ ಪೊಲೀಸರು:
ಪೊಲೀಸ್ ಮೂಲಗಳ ಪ್ರಕಾರ ರಾಮ ಪೂಜಾರಿ ಯುವತಿಯೊಬ್ಬಳನ್ನು ಪ್ರೀತಿಸಿದ್ದು, ಆಕೆಯೊಂದಿಗಿನ ಖಾಸಗಿ ವೀಡಿಯೋಗಳನ್ನು ತನ್ನಲ್ಲಿ ಇರಿಸಿಕೊಂಡು ಯುವತಿಯ ಮನೆಯವರನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಇದರಿಂದ ರೋಸಿ ಹೋದ ಯುವತಿಯ ಮನೆಯವರು ಡಿವೈಎಸ್ಪಿ ಅವರಿಗೆ ದೂರು ನೀಡಿದ್ದರು. ಅದರಂತೆ ಗಂಗೊಳ್ಳಿ ಪೊಲೀಸರಿಗೆ ವಿಚಾರಣೆ ನಡೆಸಲು ನಿರ್ದೇಶಿಸಲಾಗಿತ್ತು. ವಿಚಾರಣೆಗೆ ಕರೆಸಿ ಪಿಟ್ಟಿ ಕೇಸ್ ದಾಖಲಿಸಿ ಎಚ್ಚರಿಕೆ ಕೊಟ್ಟು ಕಳಿಸಿದ್ದೇವೆ. ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ ಎಂದಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಟುಂಬಿಕರಿಂದ ಪ್ರತಿಭಟನೆ:
ಗಂಭೀರವಾಗಿ ಹಲ್ಲೆಗೊಳಗಾಗಿದ್ದ ರಾಮ ಪೂಜಾರಿ ಸಾವಿಗೆ ಗಂಗೊಳ್ಳಿ ಪೊಲೀಸರೆ ಕಾರಣ ಎಂದು ಆರೋಪಿಸಿ ಮಂಗಳವಾರ ಬೆಳಿಗ್ಗೆ ರಾಮ ಪೂಜಾರಿ ಶವ ಪತ್ತೆಯಾದ ಸ್ಥಳದಲ್ಲಿ ಕುಟುಂಬಿಕರು, ತಾಲೂಕು ಬಿಲ್ಲವ ಸಂಘದ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಕಾನೂನು ಪ್ರಕಾರ ಕ್ರಮ ಕೈಗೊಂಡು ರಾಮ ಪೂಜಾರಿ ತಪ್ಪು ಮಾಡಿದ್ದರೆ, ಕ್ರಮ ಕೈಗೊಳ್ಳಬಹುದಿತ್ತು. ಆದರೆ ಅದ್ಯಾವುದನ್ನೂ ಮಾಡದೇ ಕಿರುಕುಳ ಹಾಗೂ ಹಲ್ಲೆ ನಡೆಸಿರುವುದು ಖಂಡನಾರ್ಹ. ಹಲ್ಲೆ ನಡೆಸಿದ ಗಂಗೊಳ್ಳಿ ಪೊಲೀಸರನ್ನು ಅಮಾನತುಗೊಳಿಸಿ ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂಬುದಾಗಿ ಪಟ್ಟು ಹಿಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಎಎಎಸ್ಪಿ ಹರಿರಾಮ್ ಶಂಕರ್ ಮೊದಲಾದವರು ಭೇಟಿ ನೀಡಿ ಪ್ರಕರಣದ ತನಿಕೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಯಿತು.  ಈ ಸಂದರ್ಭ ಬೈಂದೂರು ತಾಲೂಕು ಬಿಲ್ಲವ ಸಂಘದ ಪ್ರಮುಖರು ನ್ಯಾಯಕ್ಕಾಗಿ ಆಗ್ರಹಿಸಿದರು. ಈ ಸಂದರ್ಭ ಮಹೇಂದ್ರ ಪೂಜಾರಿ, ಮೋಹನ ಪೂಜಾರಿ, ಬಿಲ್ಲವ ಸಂಘದ ಪ್ರಮುಖರಾ ಗಣೇಶ್ ಪೂಜಾರಿ, ಶೇಖರ ಪೂಜಾರಿ ವಿಜಯ ಪೂಜಾರಿ ನಾಗೂರು, ಗಣೇಶ್ ಪೂಜಾರಿ ಸೇರಿದಂತೆ ಹಲವರು ಇದ್ದರು.

ಹುಡುಗಿಯ ಮನೆಯವರು ಹಾಗೂ ಪೊಲೀಸರ ಕಿರುಕುಳದಿಂದಾಗಿಯೇ ರಾಮ ಪೂಜಾರಿ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ಆತನ ಕುಟುಂಬಿಕರು ಬಲವಾಗಿ ಆರೋಪಿದ್ದಾರೆ. ರಾಮ ಪೂಜಾರಿ ತಪ್ಪು ಮಾಡಿದ್ದರೆ ಕಾನೂನು ರಿತ್ಯಾ ಕ್ರಮ ಕೈಗೊಳ್ಳಬಹುದಿತ್ತು. ಅದರ ಬದಲಿಗೆ ಕಿರುಕುಳ ನೀಡಿ, ಹಲ್ಲೆ ನಡೆಸಿರುವುದು ಸರಿಯಲ್ಲ. ಇದರಿಂದ ಒಂದು ಜೀವವನ್ನೇ ಬಲಿಪಡೆದಂತಾಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಲೇಬೇಕು. ಸರಿಯಾದ ತನಿಕೆಯಾಗದಿದ್ದಲ್ಲಿ ತಾಲೂಕು ಬಿಲ್ಲವ ಸಂಘದ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು.– ಶೇಖರ ಪೂಜಾರಿ, ತಾಲೂಕು ಬಿಲ್ಲವ ಸಂಘ ಯುವ ಘಟಕದ ಅಧ್ಯಕ್ಷರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಮೃತ ರಾಮ ಪೂಜಾರಿ ಎಂಬುವವರ ವಿರುದ್ಧ ಮಹಿಳೆಯೋರ್ವರು ದೂರು ನೀಡಿದ್ದ ಅದರಂತೆ ರಾಮ ಪೂಜಾರಿಯನ್ನು ಠಾಣೆಗೆ ಕರೆಯಿಸಿ ಆತನ ಮೊಬೈಲ್ ಪೋನ್, ಮೆಮೋರಿ ಕಾರ್ಡ್ ಸೀಜ್ ಮಾಡಲಾಗಿತ್ತು. ದೂರುದಾರ ಮಹಿಳೆ ಖಾಸಗಿ ವಿಡಿಯೋ ವೈರಲ್ ಆಗುವ ಸಾಧ್ಯತೆ ಇರುವುದರಿಂದ ವಿಚಾರಣೆ ನಡೆಸಿ ಕಳುಹಿಸುವಂತೆ ಕೋರಿಕೊಂಡಿದ್ದರಿಂದ ಪಿಟ್ಟಿ ಕೇಸ್ ಹಾಕಿ ಕಾನೂನು ರಿತ್ಯಾ ಕ್ರಮ ಕೈಗೊಂಡು ಅವರನ್ನು ಮನೆಗೆ ಕಳುಹಿಸಲಾಗಿತ್ತು. ಇಂದು ರೈಲ್ವೆ ಹಳಿಯ ಮೇಲೆ ಆತನ ಮೃತದೇಹ ದೊರೆತಿರುವ ಬಗ್ಗೆ ತನಿಕೆ ನಡೆಸಲಾಗುವುದು.– ಹರಿರಾಮ್ ಶಂಕರ್, ಎಎಸ್ಪಿ, ಕುಂದಾಪುರ ಕುಂದಾಪ್ರ ಡಾಟ್ ಕಾಂ ಸುದ್ದಿ.

Exit mobile version