Kundapra.com ಕುಂದಾಪ್ರ ಡಾಟ್ ಕಾಂ

ಎಂ. ಎಸ್. ಶೆಟ್ಟಿಯವರಿಗೆ ಕೋ. ಮ. ಕಾರಂತ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕುಂದಪ್ರಭ ಸಂಸ್ಥೆ ಕೊಡ ಮಾಡುವ ೨೦ನೇ ವರ್ಷದ “ಕೋ.ಮ.ಕಾರಂತ” ಪ್ರಶಸ್ತಿಯನ್ನು ಕಾಂಕ್ರಿಟ್ ತಾಂತ್ರಿಕ ತಜ್ಞರೆಂದೇ ಖ್ಯಾತಿ ಗಳಿಸಿದ ಭಾರತ ಸರಕಾರದ ರಕ್ಷಣಾ ಇಲಾಖೆಯ ಕಾಲೇಜ್ ಆಫ್ ಮಿಲಿಟರಿ ಇಂಜಿನಿಯರಿಂಗ್‌ನ ನಿವೃತ್ತ ಹಿರಿಯ ಪ್ರೊಫೆಸರ್, ಕೋಟೇಶ್ವರದ ಪ್ರೊ. ಎಂ.ಎಸ್. ಶೆಟ್ಟಿಯವರಿಗೆ ಸ.ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಸಮಾರಂಭವನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯ ಮುಜುರಾಯಿ, ಬಂದರು, ಒಳನಾಡು ಜಲಸಾರಿಗೆ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಪ್ರಶಸ್ತಿಗಾಗಿ ತಡಕಾಟ, ಪ್ರಭಾವ ಬೀರುವ ಈ ಕಾಲದಲ್ಲಿ ಎಂ.ಎಸ್.ಶೆಟ್ಟಿಯಂತಹ ನೈಜ ಸಾಧಕರನ್ನು ಈ ಪ್ರಶಸ್ತಿಯೇ ಅರಸಿಕೊಂಡು ಬಂದಿದೆ. ಇವರ ಜೀವನಾನುಭವ, ತಾಂತ್ರಿಕ ಪರಿಣತಿಯನ್ನು ಸರಕಾರ ಸಮಾಜಕ್ಕೆ ಪ್ರಯೋಜನವಾಗುವ ನಿಟ್ಟಿನಲ್ಲಿ ಬಳಸಿಕೊಳ್ಳಲು ಚಿಂತಿಸಲಾಗುವುದು. ಕುಂದಪ್ರಭ ಕಳೆದ ಮೂರು ದಶಕಗಳಲ್ಲಿ ಸಮಾಜಕ್ಕೆ ಅನುಕೂಲವಾಗುವ ಹಲವು ಕಾರ್ಯಗಳನ್ನು ಮಾಡಿದೆ, ಅಪೂರ್ವ ಸಾಧಕರನ್ನು ಗುರುತಿಸಿ ಗೌರವಿಸುವ ಈ ಕಾರ್ಯಕ್ರಮ ವಿಶಿಷ್ಟವಾದುದು” ಎಂದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸಾಧನೆಗೈದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿ ಕುಂದಾಪುರ ಪುಟ್ಟ ಪಟ್ಟಣವಾದರೂ ಚಟುವಟಿಕೆಯ ಕೇಂದ್ರ. ಸದಾ ಏನಾದರೊಂದು ಕ್ರಿಯಾಶೀಲ ಕಾರ್ಯಕ್ರಮ ನಡೆಯುತ್ತಾ ಇರುತ್ತದೆ. ಕುಂದಪ್ರಭ ಸಂಸ್ಥೆಯ ವಿಶಿಷ್ಟ ಕಾರ್ಯಕ್ರಮಗಳನ್ನೂ ನಾನು ಗಮನಿಸಿದ್ದೇನೆ, ಭಾಗವಹಿಸಿದ್ದೇನೆ. ಪ್ರೊ.ಎಂ.ಎಸ್.ಶೆಟ್ಟಿಯವರಿಗೆ ಪ್ರಶಸ್ತಿ ಪ್ರದಾನ ಮಾಡುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಜೀವಮಾನದ ವಿಶೇಷ ಕ್ಷಣವಾಗಿ ಉಳಿಯುತ್ತದೆ.

ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಮಾತನಾಡಿ ಯಾವುದೇ ಮಾಧ್ಯಮದಲ್ಲಿ ಶಿಕ್ಷಣ ಪಡೆದರೂ ಮಾತೃಭಾಷೆ ನೀಡುವ ಖುಷಿ, ಜ್ಞಾನ ಬೇರೆ ಯಾವುದೂ ನೀಡುವುದಿಲ್ಲ. ಪ್ರೊ. ಸುಬ್ಬಣ್ಣ ಶೆಟ್ಟಿಯವರನ್ನು ಪರಿಗಣಿಸಿದರೆ ಕನ್ನಡ ಮಾಧ್ಯಮದಲ್ಲೇ ಕಲಿತು ದೊಡ್ಡ ಹುದ್ದೆಗೇರಿದರು. ದೇಶದ ಎಲ್ಲ ಭಾಷೆಯ ರಕ್ಷಣಾ ಇಲಾಖೆಯ ಇಂಜಿನಿಯರಿಗೂ ತಮ್ಮ ಸಂಸ್ಥೆಯಲ್ಲಿ ತರಬೇತಿ ನೀಡಿದರು. ಆರು ದಶಕಗಳಿಗೂ ಹೆಚ್ಚು ಕಾಲ ಊರಿನಿಂದ ಹೊರಗಿದ್ದರೂ ಮಾತೃಭಾಷೆಯನ್ನು ಬಿಡಲಿಲ್ಲ. ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡುತ್ತಾರೆ. ಶಾಲೆಯಲ್ಲಿ ಕಲಿತದ್ದನ್ನು ಸ್ಮರಿಸುತ್ತಾರೆ. ವಿದ್ಯಾರ್ಥಿಗಳು ಹೆತ್ತವರು ಇದನ್ನು ಗಮನಿಸಬೇಕು ಎಂದು ಹೇಳಿದರು.

ಕುಂದಾಪುರದ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ‍್ಸ್ ಆಂಡ್ ಆರ್ಕಿಟೆಕ್ಸ್‌ನ ಅಧ್ಯಕ್ಷ ರಾಮಚಂದ್ರ ಆಚಾರ್, ಈ ಹಿಂದೆ ಕೋ.ಮ.ಕಾರಂತ ಪ್ರಶಸ್ತಿ ಪುರಸ್ಕೃತರ ದತ್ತಾನಂದ ಗಂಗೊಳ್ಳಿ ಹಾಗೂ ಜಯಪ್ರಕಾಶ್ ರಾವ್ ಉಪಸ್ಥಿತರಿದ್ದು ಪ್ರೊ.ಎಂ.ಎಸ್. ಶೆಟ್ಟಿಯವರನ್ನು ಗೌರವಿಸಿದರು.

ಕೆ.ಕೆ.ರಾಮನ್, ಹಂದಕುಂದ ಸೋಮಶೇಖರ ಶೆಟ್ಟಿಯವರನ್ನು ಅಭಿನಂದಿಸಲಾಯಿತು. ಕುಂದಪ್ರಭದ ಯು.ಎಸ್.ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋ.ಮ.ಕಾರಂತ ಸಹೋದರ ಲೇಖಕ ಕೋ. ಶಿವಾನಂದ ಕಾರಂತ ಗುಜ್ಜಾಡಿ ಪ್ರಶಸ್ತಿ ಪತ್ರ ವಾಚಿಸಿದರು. ಡಾ ಯು. ಸುಷ್ಮಾ ಶೆಣೈ, ಯು. ಸಂಗೀತಾ ಶೆಣೈ ಪ್ರತಿಭಾವಂತ ವಿದ್ಯಾರ್ಥಿಗಳ ವಿವರ ನೀಡಿದರು. ಕೋ.ಮ.ಕಾರಂತ ಕುಟುಂಬದ ಕುಸುಮಾ ಎಸ್. ಕಾರಂತ, ಕೋ. ರಮಾನಂದ ಕಾರಂತ, ಗಾಯತ್ರಿ ಕಾರಂತ ಉಪಸ್ಥಿತರಿದ್ದರು. ಲೇಖಕ ಪಿ. ಜಯವಂತ ಪೈ ವಂದಿಸಿದರು. ತೆಂಕನಿಡಿಯೂರು ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು.

 

Exit mobile version