Kundapra.com ಕುಂದಾಪ್ರ ಡಾಟ್ ಕಾಂ

ವಿಕಾಸ ಸೌರ ಸ್ವಾವಲಂಬನೆ: ಗೋಳಿಹೊಳೆಯಲ್ಲಿ ಸೋಲಾರ್ ಸ್ವ-ಉದ್ಯೋಗ ಕೇಂದ್ರಗಳ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಂಪ್ರದಾಯಿಕ ಶಕ್ತಿಮೂಲಗಳು ಕ್ಷಯಿಸುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಪರ್ಯಾಯ ಮೂಲಗಳ ಅವಲಂಬನೆ ಅನಿವಾರ್ಯವೆನಿಸಿದೆ. ಧಾರಾಳವಾಗಿ, ಉಚಿತವಾಗಿ ಲಭ್ಯವಿರುವ ಹಾಗೂ ಪರಿಸರ ಸ್ನೇಹಿಯಾಗಿರುವ ಸೌರಶಕ್ತಿಯನ್ನು ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಲು ಸಾಧ್ಯವಿರುವುದರಿಂದ ಜನರು ಅದರತ್ತ ಹೊರಳಬೇಕು ಎಂದು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಅಧ್ಯಕ್ಷ ಪಿ. ಗೋಪಿಕೃಷ್ಣ ಹೇಳಿದರು.

ಗೋಳಿಹೊಳೆಯ ಮಹಿಷಾಸುರ ಮರ್ಧಿನಿ ಸಭಾಭವನದಲ್ಲಿ ಬ್ಯಾಂಕ್ ಮತ್ತು ಸೆಲ್ಕೋ ಸೋಲಾರ್ ಲೈಟ್ ಜಂಟಿ ಆಶ್ರಯದಲ್ಲಿ ಬುಧವಾರ ನಡೆದ ’ವಿಕಾಸ ಸೌರ ಸ್ವಾವಲಂಬನೆಯ ಮೊದಲ ಸಾಧನೆ’ಯನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮೆಲ್ಲ ದಿನಬಳಕೆಯ ಉಪಕರಣಗಳಿಗೆ ಈಗ ವಿದ್ಯುತ್ ಅನಿವಾರ್ಯ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸುಲಭ ಲಭ್ಯವಲ್ಲ. ಆದುದರಿಂದ ಸೆಲ್ಕೋ ಸೋಲಾರ್ ಲೈಟ್ಸ್ ಸಂಸ್ಥೆ ಬೆಳಕಿಗೆ ಮಾತ್ರವಲ್ಲದೆ ಸ್ವೋದ್ಯೋಗ ನಡೆಸಲು ಅಗತ್ಯವಿರುವ ೬೦ ಯಂತ್ರಗಳಿಗೆ ಸೌರಶಕ್ತಿ ಅಳವಡಿಸುತ್ತಿದೆ. ಅವುಗಳನ್ನು ಅಳವಡಿಸಿಕೊಳ್ಳಲು ಗ್ರಾಮೀಣ ಬ್ಯಾಂಕ್ ಸಹಾಯಧನ ಸಹಿತವಾದ ಸಾಲ ನೀಡುತ್ತದೆ. ಜನರು ಈ ಸೌಲಭ್ಯದ ಗರಿಷ್ಠ ಲಾಭ ಪಡೆಯಬೇಕು ಎಂದ ಅವರು, ಸ್ಥಳೀಯರ ಕೋರಿಕೆಯನ್ನು ಮನ್ನಿಸಿ ಗೋಳಿಹೊಳೆಯಲ್ಲಿ ಎಟಿಎಂ ಸೌಲಭ್ಯ ಆರಂಭಿಸಲಾಗುವುದು ಎಂದು ಹೇಳಿದರು.

ಶಾಖಾಧಿಕಾರಿ ಅರುಣ್‌ಕುಮಾರ್ ಸ್ವಾಗತಿಸಿದರು. ಬ್ಯಾಂಕ್‌ನ ಮಂಗಳೂರು ಪ್ರಾದೇಶಿಕ ಪ್ರಬಂಧಕ ರಮೇಶ ತುಂಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೆಲ್ಕೋ ಸೋಲಾರ್‌ನ ಸಹಾಯಕ ಮಹಾ ಪ್ರಬಂಧಕ ಗುರುಪ್ರಕಾಶ್ ಶೆಟ್ಟಿ ಸೆಲ್ಕೋ ನೀಡುತ್ತಿರುವ ಸೇವೆಗಳ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಪೂಜಾರಿ ಶುಭ ಹಾರೈಸಿದರು. ಸೆಲ್ಕೋ ಸೀನಿಯರ್ ಮ್ಯಾನೇಜರ್ ಚೇತನ್ ಶೆಟ್ಟಿ ವಂದಿಸಿದರು. ಬ್ಯಾಂಕ್ ಸಂಪರ್ಕಾಧಿಕಾರಿ ಉಲ್ಲಾಸ ಗುನಗ ನಿರೂಪಿಸಿದರು. ಗೋಪಿಕೃಷ್ಣ ಮತ್ತು ಅರುಣ್‌ಕುಮಾರ್ ಅವರನ್ನು ಊರವರ ಪರವಾಗಿ ಗೌರವಿಸಲಾಯಿತು.

ಸೌರ ಸ್ವಾವಲಂಬನೆ ಯೋಜನೆಯಡಿ ಮನೆಗೆ ಸೌರ ವಿದ್ಯುತ್ ಅಳವಡಿಸಿದ ರಾಘವೇಂದ್ರ, ಲಕ್ಷ್ಮೀ, ಗೀತಾ, ಹೊಲಿಗೆ ಯಂತ್ರಕ್ಕೆ ಸೌರಶಕ್ತಿ ಅಳವಡಿಸಿದ ಮಂಜುನಾಥ, ಮಂಜು, ಕಬ್ಬಿನಹಾಲು ಯಂತ್ರಕ್ಕೆ ಸೌರಶಕ್ತಿ ಅಳವಡಿಸಿದ ವೀರಭದ್ರ, ಫ್ರಿಜ್‌ಗೆ ಸೌರಶಕ್ತಿ ಅಳವಡಿಸಿದ ಕುಮಾರ್, ಬ್ಯೂಟಿ ಪಾರ್ಲರ್‌ಗೆ ಸೌರಶಕ್ತಿ ಸಂಪರ್ಕ ಪಡೆದ ಜ್ಯೋತಿ ಅವರಿಗೆ ಗೋಪಿಕೃಷ್ಣ ಸಾಲಪತ್ರ ಹಸ್ತಾಂತರಿಸಿದರು.

Exit mobile version