ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ರಿ. ಕುಂದಾಪುರ ತಾಲೂಕು ಘಟಕ ಹಾಗೂ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಘಟಕದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಕಾರ್ಯದರ್ಶಿ ರಘುನಂದನ್ ಭಟ್ ಮಾತನಾಡಿ ಭಾರತ ಜಗತ್ತಿಗೆ ಎಲ್ಲವನ್ನೂ ನೀಡಿದೆ. ಇಲ್ಲಿನ ಮಣ್ಣಿಗೆ ವಿಶೇಷ ಶಕ್ತಿಯಿದ್ದು, ತಪಸ್ಸಿನಂತೆ ತೊಡಗಿ ರಚಿಸಿದ ಸಾಹಿತ್ಯ ಬಹುಕಾಲ ಉಳಿಯುತ್ತದೆ. ಅದಕ್ಕೆ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳೇ ಸಾಕ್ಷಿ. ಯಾವುದೇ ತಾಂತ್ರಿಕ ಸೌಕಲ್ಯಗಳಿಲ್ಲದ ಕಾಲದಲ್ಲಿಯೂ ಅದು ಜಗತ್ತನ್ನು ವ್ಯಾಪಿಸಿತ್ತು. ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಮಾತನಾಡಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಎಲ್ಲಾ ಭಾಷೆಗಳನ್ನು ಸಮಾನವಾಗಿ ಕಾಣುವ ಸಂಸ್ಥೆ. ಯುವ ಸಮುದಾಯಲ್ಲಿ ಭಾಷೆ, ಸಾಹಿತ್ಯದ ಕುರಿತು ಅಭಿರುಚಿ ಮೂಡಿಸುವ ಸಲುವಾಗಿ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಪುಂಡಲೀಕ ನಾಯಕ್, ಸಹ ಶಿಕ್ಷಕಿ ಸುಮಿತ್ರಾ ಡಿ. ಐತಾಳ್ ಅತಿಥಿಗಳಾಗಿದ್ದರು. ಈ ಸಂದರ್ಭ ಸುಮಿತ್ರಾ ಡಿ. ಐತಾಳ್ ಅವರು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು.
ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಎಸ್‌ವಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ನರೇಂದ್ರ ಗಂಗೊಳ್ಳಿ ವಂದಿಸಿದರು. ಕಾಲೇಜಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಂಯೋಜಕ ಸುಕುಮಾರ ಶೆಟ್ಟಿ ಕಮಲಶಿಲೆ ಯಕ್ಷಗಾನ ಗಣಪತಿ ಸ್ತುತಿ ಹಾಡಿದರು. ತೃತೀಯ ಬಿಕಾಂ ವಿದ್ಯಾರ್ಥಿ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.