Kundapra.com ಕುಂದಾಪ್ರ ಡಾಟ್ ಕಾಂ

ಚುನಾವಣೆ ಸವಾಲು, ಕಾರ್ಯಕರ್ತರಿಗೆ ಸ್ಪಂದನೆ ನನ್ನ ಹೊಣೆ: ದೀಪಕ್ ಕುಮಾರ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಚುನಾವಣೆಗಳ ಸವಾಲು, ಪಕ್ಷದ ಕಾರ್ಯಕರ್ತನಿಗೆ ಸ್ಪಂದನೆ ಮತ್ತು ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ನಡುವೆ ಸಮನ್ವಯತೆ ಸಾಧಿಸುವುದು ಜವಾಬ್ದಾರಿ ನಿಭಾಯಿಸುವ ಹೊಣೆ ನನ್ನದಾಗಿದ್ದು, ಇದರಲ್ಲಿ ಯಾವುದೇ ರಾಜಿಯಿಲ್ಲದೇ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಬೈಂದೂರು ಮಂಡಲ ಬಿಜೆಪಿ ನೂತನ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ಶುಕ್ರವಾರ ಜರುಗಿದ ಸಮಾರಂಭಲ್ಲಿ ನೂತನ ಅಧ್ಯಕ್ಷರಾಗಿ ಪಕ್ಷದ ಧ್ವಜ ಸ್ವೀಕರಿಸಿದ ಬಳಿಕ ಮಾತನಾಡಿ ಮಂಡಲ ಅಧ್ಯಕ್ಷ ಹುದ್ದೆ ದೊಡ್ಡ ಜವಾಬ್ದಾರಿಯಾಗಿದ್ದು ಎಲ್ಲಾ ಕಾರ್ಯಕರ್ತರ ಸಹಕಾರದೊಂದಿಗೆ, ಪಕ್ಷವನ್ನು ಕಟ್ಟುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಮುಂಬರುವ ಗ್ರಾಮ ಪಂಚಾಯತ್, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಸಂಘಟನಾತ್ಮವಾಗಿ ಎದುರಿಸಲು ಸಿದ್ದರಾಗೋಣ ಎಂದು ಕರೆ ನೀಡಿದರು.

ಬೈಂದೂರು ಮಂಡಲದ ನಿರ್ಗಮಿತ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಮಾತನಾಡಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವಲ್ಲಿ ಹಾಗೂ ದೇಶ, ಹಿಂದೂತ್ವದ ವಿಚಾರಧಾರೆ, ನರೇಂದ್ರ ಮೋದಿಯವರ ವರ್ಚಸ್ಸನ್ನು ಮುಂದಿಟ್ಟುಕೊಂಡು ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಿದ್ದರಿಂದ ಬಿಜೆಪಿ ಪಕ್ಷದ ಶಾಸಕ, ಸಂಸದರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ಸಿಯಾಯಿತು. ಪಕ್ಷದ ಅಧ್ಯಕ್ಷ ಹುದ್ದೆ ಅತ್ಯಂತ ಜವಾಬ್ದಾರಿಯಿಂದ ಕೂಡಿದ್ದು, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಮಾತಿಗೆ ಕಿವಿಯಾಗಬೇಕಾದ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಕುಂದರ್, ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರವೀಣ ಶೆಟ್ಟಿ ಕಾಪೆಟ್ಟು, ಕೋಶಾಧ್ಯಕ್ಷ ರವಿ ಅಮೀನ್, ಬಿಜೆಪಿ ಪ್ರಮುಖ ಡಾ. ಅತುಲ್‌ಕುಮಾರ್ ಶೆಟ್ಟಿ. ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರು, ಯುವಮೋರ್ಚಾ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ಕಾರ್ಯದರ್ಶಿ ಬಾಲಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.

Exit mobile version