Kundapra.com ಕುಂದಾಪ್ರ ಡಾಟ್ ಕಾಂ

ಅಂತರಾಷ್ಟ್ರೀಯ ಮುಯಿಥಾಯ್ ಕಿಕ್‌ ಬಾಕ್ಸಿಂಗ್‌: ಅನೀಶ್‌ ಶೆಟ್ಟಿಗೆ ಗೆಲುವು

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಥಾಯ್ಲೆಂಡ್‌ ಫುಕೆಟ್‌ ರವಾಯ್ ಬಾಕ್ಸಿಂಗ್ ಸ್ಟೇಡಿಯಂನಲ್ಲಿ ಈಚೆಗೆ ನಡೆದ ಅಂತರ ರಾಷ್ಟ್ರ ಮಟ್ಟದ 65 ಕೆ ಜಿ ವಿಭಾಗದ ಮುಯಿಥಾಯ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಥಾಯ್ಲೆಂಡ್ ಕಿಕ್‌ ಬಾಕ್ಸರ್‌ ನ್ಯುವ್ಲಿಕಿಟ್ ವಿರುದ್ಧ ಕುಂದಾಪುರದ ಕ್ರೀಡಾಪಟು ಅನೀಶ್‌ ಶೆಟ್ಟಿ ಗೆಲುವು ದಾಖಲಿಸಿದ್ದಾರೆ.

ಬಾಕ್ಸಿಂಗ್ ರಿಂಕ್‌ನಲ್ಲಿ ಎದುರಾಳಿ ಸೋಲಿಸಿ ಅಂತರ ರಾಷ್ಟ್ರ ಮಟ್ಟದ ಚಾಂಪಿಯನ್ ಷಿಪ್‌ ಪಟ್ಟ ದಾಖಲಿಸಿದ ಅನೀಶ್ ಶೆಟ್ಟಿ ಈಗ ಎಲ್ಲರ ಗಮನ ಸೆಳೆದಿದ್ದಾರೆ. ಅನೀಶ್ ಗೆಲುವು ದಾಖಲಿಸಲು ‘ಫ್ಲೈಯಿಂಗ್ ನೀ’ (ಹಾರು ಮುಂಗಾಲು) ಹೊಡೆತವು ಪ್ರಮುಖ ಕಾರಣವಾಯಿತು.

65 ಕೆಜಿ ವಿಭಾಗದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಾಂಪಿಯನ್‌ ಷಿಪ್‌ ಪಡೆದ 30ರ ಹರೆಯದ ಅನೀಶ್‌ ಶೆಟ್ಟಿ  ಕುಂದಾಪುರ ತಾಲ್ಲೂಕಿನ ಕಟ್ಕೆರೆ ಶಂಕರ ಶೆಟ್ಟಿ ಹಾಗೂ ತಾಯಿ – ಉಷಾ ಶೆಟ್ಟಿ ದಂಪತಿ ಪುತ್ರ.

ಬೆಂಗಳೂರಿನಲ್ಲಿ ಖಾಸಗಿ ಸಾಫ್ಟ್‌ವೇರ್‌ ಕಂಪನಿಯಲ್ಲಿ ಎಂಜಿನಿಯರ್‌ ಆಗಿದ್ದಾರೆ. ಕಾಲೇಜು ದಿನಗಳಲ್ಲಿ ಉತ್ತಮ ವಾಲಿಬಾಲ್‌ ಆಟಗಾರರಾಗಿದ್ದರು. ಫಿಟ್‌ನೆಸ್‌ಗಾಗಿ ಜಿಮ್‌ ಸೇರಿಕೊಂಡಿದ್ದರು. ಅವರಿಗೆ ಗೋವಿಂದ ಸಿಂಗ್‌ ಎಂಬುವವರು ’ಮುಯಿಥಾಯ್‌’ ಕ್ರೀಡೆ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದರು.

ಬಾಕ್ಸಿಂಗ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅನೀಶ್, ಮನೆಯವರಿಗೆ ಗೊತ್ತಾಗದಂತೆ 2 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದರು. 1 ತಿಂಗಳಿನಿಂದ ಥಾಯ್ಲೆಂಡ್‌ ತರಬೇತುದಾರ ಸಿಡ್‌ ಅವರಿಂದ ತರಬೇತಿ ಪಡೆದು ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು.

ಬಾಕ್ಸರ್ ನ್ಯುವ್ಲಿಕಿಟ್ ಅವರು ಈಗಾಗಲೇ 6 ಫೈಟ್‌ಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು. ಆದರೆ ಮೊದಲ ಬಾರಿ ಸ್ಪರ್ಧೆ ಮಾಡಿದ್ದ ಅನೀಶ್‌ ಅವರು ಬಾಕ್ಸರ್ ನ್ಯುವ್ಲಿಕಿಟ್ ವಿರುದ್ಧ ಒಂದೇ ಸುತ್ತಿನಲ್ಲಿ ಗೆಲುವು ದಾಖಲಿಸಿ ದಾಖಲೆ ಬರೆದಿದ್ದಾರೆ.

Exit mobile version