Kundapra.com ಕುಂದಾಪ್ರ ಡಾಟ್ ಕಾಂ

ಕಲೆಗೆ ಪ್ರೋತ್ಸಾಹಿಸುವುದು ನಾಗರಿಕ ಸಮಾಜದ ಕರ್ತವ್ಯ: ಅಭಿನಂದನ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡಿ ಅದು ಬಹುಕಾಲ ಉಳಿಯುವಂತೆ ಮಾಡುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದು ಮಾಜಿ ಜಿಲ್ಲಾ ರೋಟರಿ ಗವರ್ನರ್ ಎ. ಅಭಿನಂದನ್ ಶೆಟ್ಟಿ ಹೇಳಿದರು.

ಅವರು ಸುರಭಿ ರಿ. ಬೈಂದೂರು ಹಾಗೂ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಬೈಂದೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ರಂಗ ಸುರಭಿ ೨೦೨೦ – ಶಿಶಿರ ನಾಟಕೋತ್ಸವಕ್ಕೆ ಡೋಲು ಭಾರಿಸಿ ಚಾಲನೆ ನೀಡಿ ಮಾತನಾಡಿ ಕಲೆ ಹಾಗೂ ಕಲಾಕಾರರಿಗೆ ಯಾವುದಾದರೂ ವೇದಿಕೆ ಅಥವಾ ಸಮೂಹದ ಮೂಲಕ ಜೀವ ಕೊಡದಿದ್ದರೆ ಅದು ನಶಿಸುವುದಲ್ಲದೇ ಒಂದು ಪರಂಪರೆಯೂ ಮಾಯವಾಗುತ್ತದೆ ಎಂದು ಹೇಳಿದರು.

ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕ್ರಮ ಆಯೋಜನೆ ಸುಲಭ ಸಾಧ್ಯವಲ್ಲ. ವೇದಿಕೆ ಸೃಷ್ಟಿಸುವ ಮೂಲಕ ಕಲಾವಿದರಿಗೊಂದು ಅವಕಾಶ ಹಾಗೂ ಪ್ರೇಕ್ಷಕರಿಗೆ ಮನೋರಂಜನೆ ಏಕಕಾಲದಲ್ಲಿ ದೊರೆತಂತಾಗುವುದು ಎಂದರು.

ಬೈಂದೂರು ಸಿಟಿ ಜೆಸಿಐ ಸ್ಥಾಪಕಾಧ್ಯಕ್ಷ ಮಣಿಕಂಠ ಎಸ್., ಉದ್ಯಮಿ ಪ್ರಸಾದ ಪ್ರಭು, ನಿವೃತ್ತ ಮುಖ್ಯೋಪಧ್ಯಾಯ ಜಿ. ತಿಮ್ಮಪ್ಪಯ್ಯ ಮಯ್ಯಾಡಿ, ಸುರಭಿ ಬೈಂದೂರು ಅಧ್ಯಕ್ಷ ಸತ್ಯನಾ ಕೊಡೇರಿ ವೇದಿಕೆಯಲ್ಲಿದ್ದರು.

ಬೈಂದೂರು ಜೆಸಿಐ ಅಧ್ಯಕ್ಷೆ ಪ್ರಿಯದರ್ಶಿನಿ ಕಮಲೇಶ್ ಅವರ ಸಾಮಾಜಿಕ ಕ್ಷೇತ್ರದ ಸೇವೆ ಗುರುತಿಸಿ ಸನ್ಮಾನಿಸಲಾಯಿತು.

ಸುರಭಿ ನಿರ್ದೇಶಕ ಸುಧಾಕರ ಪಿ. ಬೈಂದೂರು ಸ್ವಾಗತಿಸಿ, ಸದಸ್ಯ ಗಿರೀಶ್ ಪಿ. ಮೇಸ್ತ ವಂದಿಸಿದರು. ಜೊತೆಕಾರ್ಯದರ್ಶಿ ಅಬ್ದುಲ್ ರವೂಫ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ರಂಗಾಯಣ ಮೈಸೂರು ಪ್ರಸ್ತುತಿಯ, ರಮಾನಾಥ್ ಎಸ್. ರಚಿಸಿ, ಚಂದ್ರಹಾಸ್ ಕೇರಳ ನಿರ್ದೇಶಿಸಿದ ಅರ‍್ಕೇಡಿಯಾದಲ್ಲಿ ಪಕ್ ನಾಟಕ ಪ್ರದರ್ಶನಗೊಂಡಿತು.

Exit mobile version