Kundapra.com ಕುಂದಾಪ್ರ ಡಾಟ್ ಕಾಂ

ಯುವಕರಿಂದ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಕಾರ್ಯ: ಕೆ. ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಶಾಂತಿ ಸೌಹಾರ್ದದ ವಾತಾವರಣ ನೆಲೆಸಿದ್ದು, ಎಲ್ಲಾ ವರ್ಗಗಳ ಜನರ ಸಹಕಾರದಿಂದ ಗಂಗೊಳ್ಳಿಗೆ ಅಂಟಿಕೊಂಡಿದ್ದ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಕಳಚಿ ಹೋಗುತ್ತಿದೆ. ಈ ಭಾಗದ ಯುವಕರು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಗಂಗೊಳ್ಳಿಯ ಕಾರಣೀಕ ಕ್ಷೇತ್ರವಾಗಿರುವ ಶ್ರೀ ಹಾಲುಮಕ್ಕಿ ಜಟ್ಟಿಗ ದೇವಸ್ಥಾನದಲ್ಲಿ ಹತ್ತು ಸಮಸ್ತರ ಸೇವೆ ಬಯಲಾಟ ಅಪೂರ್ವವಾಗಿದ್ದು, ಇದನ್ನು ಮುನ್ನಡೆಸಿಕೊಂಡು ಬಂದಿರುವ ಸಮಿತಿಯ ಸದಸ್ಯರು ಅಭಿನಂದನಾರ್ಹರು ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ಗಂಗೊಳ್ಳಿಯ ಶ್ರೀ ರಾಮ ಪೈ ಮಠದ ಸಮೀಪದಲ್ಲಿರುವ ಶ್ರೀ ಹಾಲುಮಕ್ಕಿ ಜಟ್ಟಿಗ ದೇವಸ್ಥಾನದ ಪ್ರಯುಕ್ತ ಹತ್ತು ಸಮಸ್ತರ ಸೇವೆ ಬಯಲಾಟದ ಬೆಳ್ಳಿ ಹಬ್ಬ ಸಮಾರಂಭದ ಅಂಗವಾಗಿ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ಜರಗಿದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.

ಗಂಗೊಳ್ಳಿಯ ಪಂಚಗಂಗಾವಳಿ ಸೌಹಾರ್ದ ಕೋ-ಆಪರೇಟಿವ್ ಅಧ್ಯಕ್ಷ ರಾಜು ದೇವಾಡಿಗ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಶಿವಾನಂದ ಪೂಜಾರಿ, ಕುಂದಾಪುರ ಪರಿಯಾಳ ಸುಧಾರಕ ಸಮಾಜ ಅಧ್ಯಕ್ಷ ಮಂಜುನಾಥ ಸಾಲಿಯಾನ್, ಗುತ್ತಿಗೆದಾರ ವಾಸುದೇವ ಶೇರುಗಾರ್, ಗಂಗೊಳ್ಳಿ ಗ್ರಾಮ ಪಂಚಾಯತ್‌ನ ನಾರಾಯಣ ಶ್ಯಾನುಭಾಗ್, ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ವಾಸಪ್ಪ ನಾಯ್ಕ್ ಶುಭ ಹಾರೈಸಿದರು. ಇದೇ ಸಂದರ್ಭ ವಿವಿಧ ಶಾಲೆಗಳಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಬಹುಮಾನ ವಿತರಿಸಲಾಯಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಾ ಪೂಜಾರಿ ಉಪಸ್ಥಿತರಿದ್ದರು.

ಸಮಿತಿ ಕಾರ್ಯದರ್ಶಿ ಮಹೇಶ ಕುಮಾರ್ ಸ್ವಾಗತಿಸಿದರು. ಅಧ್ಯಕ್ಷ ಸಂತೋಷ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರತಾಪ್ ಪೂಜಾರಿ ಬಹುಮಾನ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಪತ್ರಕರ್ತ ವಸಂತ ಗಂಗೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಶ್ವೇತಾ ವಂದಿಸಿದರು.

Exit mobile version