ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತದಲ್ಲಿ ಅದೆಷ್ಟೊ ಕಾಲದಿಂದ ಎಲ್ಲ ಧರ್ಮ, ಜಾತಿ, ವರ್ಗಗಳ ಜನರು ಒಂದಾಗಿ ಜೀವಿಸುತ್ತ ಬಂದಿದ್ದಾರೆ. ಆದರೆ ಕೆಂದ್ರದ ಪ್ರಸಕ್ತ ಬಿಜೆಪಿ ಸರ್ಕಾರ ನಾಗರಿಕತೆ ಕಾಯ್ದೆಗೆ ಮಾಡಿರುವ ತಿದ್ದುಪಡಿ ಮೂಲಕ ಅವರ ನಡುವೆ ಭೇದ ಸೃಷ್ಟಿಸಿ ವಿಭಜಿಸುವ ಕೆಲಸಕ್ಕೆ ಮುಂದಾಗಿದೆ. ಈ ಕೃತ್ಯವನ್ನು ಎಲ್ಲ ಸೇರಿ ವಿರೋಧಿಸಬೇಕು ಎಂದು ಮಾನವ ಹಕ್ಕುಗಳ ಹೋರಾಟಗಾರ ಫಾ. ವಿಲಿಯಂ ಮಾರ್ಟಿಸ್ ಹೇಳಿದರು.
ಕುಂದಾಪುರ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಹೋರಾಟ ಸಮಿತಿ ಬುಧವಾರ ನಾವುಂದದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆ ಉದ್ಘಾಟಿಸಿ ಮಾತನಾಡಿದರು. ಇಂತಹ ಒಂದು ಕರಾಳ ಕ್ರಮಕ್ಕೆ ಅಸ್ಸಾಂ ರಾಜ್ಯವನ್ನು ಪ್ರಯೋಗ ಭೂಮಿಯಾಗಿ ಆರಿಸಿಕೊಳ್ಳಲಾಗಿದೆ. ಅಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ೧೯ ಲಕ್ಷ ಜನರು ದೇಶದ ನಾಗರಿಕರಲ್ಲ ಎಂದು ಕಂಡುಕೊಳ್ಳಲಾಗಿದೆ. ಅವರಲ್ಲಿ೧೪ ಲಕ್ಷ ಜನರು ಹಿಂದುಗಳಿದ್ದಾರೆ. ಅವರೆಲ್ಲ ಈಗ ಸಂಕಷ್ಟದಲ್ಲಿದ್ದಾರೆ. ಆದರೂ ತಿದ್ದುಪಡಿ ಕಾಯಿದೆಯಿಂದ ದೇಶದ ಹಿಂದುಗಳಿಗೆ ತೊಂದರೆಯಾಗದು ಎಂದು ಸುಳ್ಳು ಹೇಳುತ್ತಿದ್ದಾರೆ. ನಿಜವಾಗಿ ಶೇ ೪೦ ಹಿಂದುಗಳು ನಾಗರಿಕತೆಯಿಂದ ವಂಚಿತರಾಗಿ ಸಂಕಷ್ಟ ಅನುಭವಿಸಲಿದ್ದಾರೆ. ದೇಶದಲ್ಲಿ ಆರ್ಥಿಕ ಕುಸಿತ, ನಿರುದ್ಯೋಗ, ಬಡತನದಂತಹ ಗಂಭೀರ ಸಮಸ್ಯೆಗಳಿಂದ ಜನ ನಲುಗುತ್ತಿರುವಾಗ ಅವುಗಳನ್ನು ಪರಿಹರಿಸಲು ಆದ್ಯತೆ ನೀಡುವ ಬದಲು ಇಂತಹ ಜನವಿರೋಧಿ ಕ್ರಮಗಳಿಗೆ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಅವರು ಟೀಕಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಶಶಿಧರ ಹೆಮ್ಮಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಯುವ ಚಿಂತಕಿ ಭವ್ಯಾ ನರಸಿಂಹಮೂರ್ತಿ ಮೋದಿ ನೇತೃತ್ವದ ಬಿಜೆಪಿ ಚುನಾವಣೆಯಲ್ಲಿ ಜಯಗಳಿಸಲು ಸೈನ್ಯ ಮತ್ತು ಧರ್ಮವನ್ನು ಬಳಸಿಕೊಳ್ಳುತ್ತಿದೆ. ಆದರೆ ಸೈನಿಕರಿಗೆ ಸೂಕ್ತ ಸೌಲಭ್ಯ ಕಲ್ಪಿಸುವುದನ್ನು ನಿರ್ಲಕ್ಷಿಸುತ್ತಿದೆ. ಅವರ ಆಡಳಿತಲ್ಲಿ ವಿದ್ಯಾರ್ಥಿಗಳ, ಮಹಿಳೆಯರ ಮತ್ತು ದಲಿತರ ಮೇಲೆ ದೌರ್ಜನ್ಯ ಹೆಚ್ಚಿದೆ. ಈ ವರ್ಗಗಳ ವಿರೋಧಿ. ಸಿಎನ್‌ಎನ್ ಭಾರತ ಎಂಬ ಪರಿಕಲ್ಪನೆಗೇ ವಿರೋಧಿಯಾಗಿದೆ ಎಂದರು.
ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸಾಮಾಜಿಕ ಹೋರಾಟಗಾರ ಮುನೀರ್ ಜನ್ಸಾಲೆ, ಸುಧೀರ್‌ಕುಮಾರ್ ಮರೋಳಿ, ಎಸ್‌ಎಸ್‌ಎಫ್ ರಾಜ್ಯ ಕಾರ್ಯದರ್ಶಿ ಕೆ.ಪಿ. ಸಿರಾಜುದ್ದೀನ್ ಸಖಾಫಿ, ಆಲ್ ಇಂಡಿಯ ಇಮಾಮ್ ಕೌನ್ಸಿಲ್ ರಾಜ್ಯ ಉಪಾಧ್ಯಕ್ಷ ಮುಫ್ತಿ ಮಝಮ್ ಮೌಲಾನಾ, ಚಿಂತಕಿ-ವಾಗ್ಮಿ ನಜ್ಮಾ ನಝೀರ್ ಚಿಕ್ಕನೇರಳೆ, ಕುಂದಾಪುರ ಡಿವೈಎಫ್‌ಐ ಅಧ್ಯಕ್ಷ ರಾಜೇಶ ವಡೇರಹೋಬಳಿ ಮಾತನಾಡಿ ಕಾಯ್ದೆ ಮತ್ತು ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು. ಅಸಿಮ್ ಕುಂದಾಪುರ ವಂದಿಸಿದರು. ಇಕ್ಬಾಲ್ ಮತ್ತು ಆಸೀನ್ ಕುಂದಾಪುರ ನಿರೂಪಿಸಿದರು.
ಮಾಜಿ ಸಚಿವ ವಿನಯಕುಮಾರ ಸೊರಕೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬ್ಲಾಕ್ ಕಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹ ದೇವಾಡಿಗ, ಜಾಮಿಯಾ ಮಸೀದಿ ಅಧ್ಯಕ್ಷ ತೌಫೀಕ್ ಅಬ್ದುಲ್ಲಾ, ಉಪಾಧ್ಯಕ್ಷ ಮನ್ಸೂರ್ ಇಬ್ರಾಹಿಂ, ಬೈಂದೂರು ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಮಂಜುನಾಥ ಹಳಗೇರಿ, ಕರ್ನಾಟಕ ಮುಸ್ಲಿಮ ಜಮಾತ್‌ನ ಇಲ್ಯಾಸ್ ನಾವುಂದ, ಎಸ್‌ಡಿಪಿಐ ಅಧ್ಯಕ್ಷ ಆಸೀಫ್ ಕೋಟೇಶ್ವರ, ಬೈಂದೂರು ಮುಸ್ಲಿಂ ಒಕ್ಕೂದ ಅಧ್ಯಕ್ಷ ಹಸನ್ ಮಾವಡ್, ತಬ್ರೆಜ್ ನಾಗೂರು, ನಾಸೀರ್, ಇತರರು ಇದ್ದರು. ಆರಂಭದಲ್ಲಿ ’ಸಾರೇ ಜಹಾಂಸೆ ಅಚ್ಛಾ’ ಹಾಡಲಾಯಿತು. ಹಿದಾಯತ್ ಕಂಡ್ಲೂರು ಕಾಯ್ದೆ ವಿರೋಧಿ ಉರ್ದು ಮತ್ತು ಕನ್ನಡ ಶಾಯರಿ ಪ್ರಸ್ತುತಪಡಿಸಿದರು. ಸಭೆಯ ಆರಂಭದಲ್ಲಿ ಮತ್ತು ನಡುವೆ ಆಜಾದಿ ಘೋಷಣೆ ಮೊಳಗಿದುವು. ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯವಾಯಿತು.