ಕುಂದಾಪ್ರ ಡಾಟ್ ಕಾಂ ವರದಿ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿವದೇವಾಲಯಗಳಲ್ಲಿ ಶಿವಲಿಂಗ ಸ್ಪರ್ಶಪೂಜೆಯ ಏಕೈಕ ಶಿವದೇಗುಲ ಎಂಬ ಪ್ರಸಿದ್ಧಿಗೆ ಪಾತ್ರವಾದ ಬೈಂದೂರಿನ ಗಂಗಾನಾಡು ಗ್ರಾಮದ ವಣಕೊಡ್ಲುವಿನ ಪುರಾತನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವದಂದು ಸಹಸ್ರಾರು ಭಕ್ತರು ಭಕ್ತಿ-ಭಾವದೊಂದಿಗೆ ಶಿವಲಿಂಗ ಸ್ವರ್ಶಿಸಿ ಪುನೀತರಾದರು.
Video
ಬೆಳಿಗ್ಗೆ 7 ಗಂಟೆಯಿಂದಲೇ ಭಕ್ತಾದಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಮತ್ತು ಸ್ಪರ್ಶಪೂಜೆ ಆರಂಭಗೊಂಡಿದ್ದು ರಾತ್ರಿ 10 ಗಂಟೆಗೆ ದೇವರ ಸುತ್ತು ಉತ್ಸವ, ಕಟ್ಟೆಪೂಜೆ ಹಾಗೂ ಪ್ರಸಾದ ವಿತರಣೆ, ಮಾರ್ಚ್ 8ರಂದು ಶುದ್ಧಕಳಶ, ಕಲಾವೃದ್ಧಿಹೋಮ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಕುಂದಾಪ್ರ ಡಾಟ್ ಕಾಂ ಲೇಖನ
ಹಲವು ಗಣ್ಯ ಮಹನೀಯರು ಮಹಾಶಿವರಾತ್ರಿ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಹೊತ್ತಿಗೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಕುಟುಂಬ ಸಮೇತ ಆಗಮಿಸಿ ದರ್ಶನ ಪಡೆದರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದಡಾ ರಾಜಮೋಹನ್ ಶೆಟ್ಟಿ ಡಾ. ಮಿಥುನ್ ಶೆಟ್ಟಿ, ಡಾ. ತಿಲಕ್ ಶೆಟ್ಟಿ ಮೊದಲಾದವರು ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಬೈಂದೂರು ಪೋಲಿಸರು ಶಿಸ್ತು ವ್ಯವಸ್ಥೆಯನ್ನು ಕೈಗೊಂಡಿದ್ದರು. ಸ್ಥಳೀಯ ಉತ್ಸಾಹೀ ಯುವಕರು ಸ್ವಯಂಸೇವಕರಾಗಿ ಉತ್ಸವದ ಯಶಸ್ಸಿಗೆ ಸಹಕರಿಸಿದರು.
ಐತಿಹ್ಯ:
ವಿಶಿಷ್ಟ ಕ್ಷೇತ್ರ:ಕ್ರಿ. ಶ. 958ನೇ ಇಸವಿಯಲ್ಲಿ ರಾಜಾಶ್ರಯವನ್ನು ಪಡೆದಿದ್ದ ದೇಗುಲವೆನ್ನಲಾದ ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಶಿವಲಿಂಗ ಸ್ಪರ್ಶ ಪೂಜೆಯ ವಿಶಿಷ್ಟ ಕ್ಷೇತ್ರವೆನಿಸಿದೆ. ಮಹಾಶಿವರಾತ್ರಿ ದಿನವನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ಅರ್ಚಕರಿಂದ ದೇಗುಲದಲ್ಲಿ ಪೂಜೆ ನಡೆಯುತ್ತದೆ. ಮಹಾಶಿವರಾತ್ರಿಯಂದು ಈ ದೇಗುಲಕ್ಕೆ ಹರಿದು ಬರುವ ಭಕ್ತ ಜನಸಾಗರವು ದೇಗುಲದ ಗರ್ಭಗುಡಿಯನ್ನು ಪ್ರವೇಶಿಸಿ ಶಿವಲಿಂಗವನ್ನು ಮುಟ್ಟಿ ಪೂಜಿಸಿ ಪುಲಕಿತರಾಗುವ ಪುಣ್ಯಾವಕಾಶವನ್ನು ಪಡೆಯುತ್ತಾರೆ. ಆದ್ದರಿಂದ ಈ ಕ್ಷೇತ್ರ ಎರಡನೆಯ ಗೋಕರ್ಣ ಎಂದೂ ಕರೆಯಲ್ಪಟ್ಟಿದೆ. ದೇವಸ್ಥಾನದ ಮುಂಭಾಗದಲ್ಲಿರುವ ವಿಶಾಲವಾದ ಪುಷ್ಕರಿಣಿಯ ಪವಿತ್ರ ಜಲವು ಗಂಗಾ ನದಿಯಿಂದ ಹರಿದು ಬರುವ ಒರತೆ ಎಂಬ ಪ್ರತೀತಿಯಿದೆ. ಗಂಗೆಯ ನಾಳ ಹರಿದು ಬರುವುದರಿಂದ ಈ ಪ್ರದೇಶವು ಗಂಗಾನಾಡು ಎಂದು ಕರೆಯಲ್ಪಟ್ಟಿದೆ ಎನ್ನಲಾಗುತ್ತದೆ. ಕುಂದಾಪ್ರ ಡಾಟ್ ಕಾಂ ಲೇಖನ
ಶಿವಸಾನ್ನಿಧ್ಯ: ಪುರಾತನವಾದ ಈ ದೇವಸ್ಥಾನದಲ್ಲಿ ಪಾರ್ವತಿ, ಗಣಪತಿ ಸಹಿತ ಶಿವ ಸಾನ್ನಿಧ್ಯವಿದೆ. ದೇಗುಲದ ಹೊರಭಾಗದಲ್ಲಿ ನಾಗದೇವರ ಸಾನ್ನಿಧ್ಯವಿದೆ. ಪುಷ್ಕರಿಣಿ, ಬಲಿಕಲ್ಲು, ಧ್ವಜಪೀಠ ಮೊದಲಾದುವುಗಳಿವೆ. ಶಿವರಾತ್ರಿ ಉತ್ಸವವು ಇಲ್ಲಿನ ಅತ್ಯಂತ ಸಂಭ್ರಮದ ಆಚರಣೆಯಾಗಿ ಖ್ಯಾತವಾಗಿದೆ. ನವರಾತ್ರಿ ಉತ್ಸವ, ದೀಪದ ಅಮಾವಾಸ್ಯೆಯನ್ನು ಇಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕುಂದಾಪ್ರ ಡಾಟ್ ಕಾಂ ಲೇಖನ
ರಾಜಾಶ್ರಯ ತಪ್ಪಿದ ಬಳಿಕ ಸ್ವಲ್ಪಮಟ್ಟಿಗೆ ಕಳಾಹೀನವಾದ ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಸ್ಥಳೀಯ ಯಡ್ತರೆ ಮನೆತನದವರು ಹಂತ ಹಂತವಾಗಿ ಅಭಿವೃದ್ಧಿಯ ಹಾದಿಯಲ್ಲಿ ಸಾಗಿಸಿದ್ದಾರೆ. ಈ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಯಡ್ತರೆ ಅಣ್ಣಪ್ಪ ಶೆಟ್ಟಿ ಮತ್ತು ಅವರ ಪುತ್ರರು ದೇವಸ್ಥಾನದ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, 2010ರ ಜೂನ್ ತಿಂಗಳಿನಲ್ಲಿ ಇಲ್ಲಿನ ಶ್ರೀದೇವರ ಅಷ್ಟಬಂಧ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮೊದಲಾದ ಕಾರ್ಯಗಳು ನಡೆದಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಭಕ್ತರ ಅನುಕೂಲಕ್ಕಾಗಿ ದೇವಾಲಯದಲ್ಲಿ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಕುಂದಾಪ್ರ ಡಾಟ್ ಕಾಂ ಲೇಖನ
ಇದನ್ನೂ ಓದಿ:
► ಕೊಡಪಾಡಿ ಶ್ರೀ ಗುಹೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=35543
► ಕುಂದಾಪುರ: ಶ್ರೀ ಕುಂದೇಶ್ವರನ ಸ್ಮರಿಸಿ ಕೃತಾರ್ಥರಾದ ಭಕ್ತರು – https://kundapraa.com/?p=35553
► ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=35569