ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಲಾವಣ್ಯ ರಿ. ಬೈಂದೂರು ಸಂಸ್ಥೆಯ ೪೩ನೇ ವಾರ್ಷಿಕೋತ್ಸವ ಹಾಗೂ ದಿ. ಬಿ. ಮಾಧವ ರಾವ್ ಸ್ಮರಣಾರ್ಥ ರಂಗಮಾಧವ ನಾಟಕೋತ್ಸವ ಫೆಬ್ರವರಿ 29ರಿಂದ ಮೂರು ದಿನಗಳ ಕಾಲ ಬೈಂದೂರಿನ ಶಾರದಾ ವೇದಿಕೆಯಲ್ಲಿ ಪ್ರತಿದಿನ ಸಂಜೆ 6:30ಕ್ಕೆ ಜರುಗಲಿದೆ.
ಫೆಬ್ರವರಿ 29ರಂದು ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನ ಅಧ್ಯಕ್ಷರಾದ ಎ.ಬಿ. ಶೇರಿಗಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಂದು ಲಾವಣ್ಯ ಹೋಂ ಥಿಯೇಟರ್‌ನ್ನು ಖ್ಯಾತ ಜ್ಯೋತಿಷಿ ಡಾ. ಮಹೇಂದ್ರ ಭಟ್ ಉದ್ಘಾಟಿಸಲಿದ್ದಾರೆ. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಶುಭಶಂಸನೆಗೈಯಲಿದ್ದು, ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ, ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೂಕಾಂಬು ದೇವಾಡಿಗ ಸೇರಿದಂತೆ ವಿವಿಧ ಅತಿಥಿ ಗಣ್ಯರು ಉಪಸ್ಥಿತರಿರಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಕರ್ನಾಟಕ ಉದ್ಯಮರತ್ನ ಪ್ರಶಸ್ತಿ ಪುರಸ್ಕೃತ ಬಿ.ಎಸ್. ಸುರೇಶ್ ಶೆಟ್ಟಿ ಹಾಗೂ ಪಾಂಡುರಂಗ ಪಡಿಯಾರ್, ವೈದ್ಯರಾದ ಡಾ. ಕೆ.ಆರ್ ನಂಬಿಯಾರ್, ಡಾ. ಸಚ್ಚಿದಾನಂದ ಶೆಟ್ಟಿ, ಬೈಂದೂರು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಶಂಕರ ಶೆಟ್ಟಿ, ನಿವೃತ್ತ ಶಿಕ್ಷಕ ಸದಾಶಿವ ಶ್ಯಾನುಭೋಗ್ ಕಿರಿಮಂಜೇಶ್ವರ, ಚಲನಚಿತ್ರ ನಿರ್ದೇಶಕ ಚಂದ್ರಕಾಂತ ಕೊಡಪಾಡಿ, ಯಕ್ಷಗಾನ ಕಲಾವಿದ ನಾರಾಯಣ ಮೊಗವೀರ ಅವರನ್ನು ಸನ್ಮಾನಿಸಲಾಗುವುದು.
ದಿ. ಬಿ. ಮಾಧವ ರಾವ್ ಸ್ಮರಣಾರ್ಥ ರಂಗಮಾಧವ ನಾಟಕೋತ್ಸವದಲ್ಲಿ ಫೆಬ್ರವರಿ 29ರಂದು ಲಾವಣ್ಯ ಬೈಂದೂರು ಪ್ರಸ್ತುತಿ, ಡಾ. ಚಂದ್ರಶೇಖರ ಕಂಬಾರ್ ರಚಿಸಿ, ದಿ. ಈ. ಸೀತಾರಾಮ ಶೆಟ್ಟಿ ಕೂರಾಡಿ ಪರಿಕಲ್ಪನೆ ಹಾಗೂ ವಿನ್ಯಾಸದ, ಬಿ. ಗಣೇಶ ಕಾರಂತ್ ನಿರ್ದೇಶನದ ನಾಟಕ ’ನಾಯೀ ಕಥೆ’ ಪ್ರದರ್ಶನಗೊಳ್ಳಲಿದೆ. ಮಾಚ್ 1ರಂದು ಚಿತ್ತಾರ ಬೆಂಗಳೂರು ಪ್ರಸ್ತುತಿ, ರಾಜೇಂದ್ರ ಕಾರಂತ್ ರಚಿಸಿ ನಿರ್ದೇಶಿಸಿದ ನಾಟಕ ’ನಾಯಿ ಕಳೆದಿದೆ’ ಪ್ರದರ್ಶನಗೊಳ್ಳಲಿದೆ. ಮಾಚ್ 2ರಂದು ಅನನ್ಯ ಬೆಂಗಳೂರು ಪ್ರಸ್ತುತಿ, ಎಸ್. ಎನ್. ಸೇತುರಾಮ್ ರಚಿಸಿ ನಿರ್ದೇಶಿಸಿದ ’ಉಚ್ಛಿಷ್ಟ’ ನಾಟಕ ಪ್ರದರ್ಶನಗೊಳ್ಳಲಿದೆ.