Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಎನ್‌ಬಿಎ ಮಾನ್ಯತೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ಹಾಗೂ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನೀಕೆಷನ್ ಇಂಜಿನಿಯರಿಂಗ್ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿಯ (ಎನ್‌ಬಿಎ) ಮಾನ್ಯತೆ ಲಭಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶೈಕ್ಷಣಿಕ ಸಂಸ್ಥೆಯು ನಿರ್ದಿಷ್ಟಗುಣ ಮಟ್ಟವನ್ನು ಹೊಂದಿದೆಯೇ ಅಥವಾ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುತ್ತದೆಯೇ ಎನ್ನುವುದನ್ನು ವೃತ್ತಿಪರ ಪರಿಶೀಲನೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ದೃಢೀಕರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಮಾನ್ಯತೆಯ ಪರಿಣಾಮವಾಗಿ ಸಂಸ್ಥೆಗಳಿಂದ ಗುಣಮಟ್ಟದ ಸುಧಾರಣೆಗಳ ಉಪಕ್ರಮಗಳನ್ನು ಉತ್ತೇಜಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಪದವೀಧದರಿಗೆ ಉದ್ಯೋಗಾವಕಾಶವನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ೨೦೦೮ ರಲ್ಲಿ ಆರಂಭಗೊಂಡ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ದೇಶದಲ್ಲಿನ ಪ್ರಮುಖ ತಾಂತ್ರಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಪದವೀಧರರ ಹಾಗೂ ಸ್ನಾತಕೋತ್ತರ ಪದವಿಯ ಸಮಗ್ರ ಅಭಿವೃದ್ಧಿಗೆ ನವೀನ ಬೋಧನಾ-ಕಲಿಕಾ ಪ್ರಕ್ರಿಯೆಯ ಮೂಲಕ ಗುಣಮಟ್ಟ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿದೆ. ಪ್ರಸ್ತುತ ಈ ಸಂಸ್ಥೆಯಲ್ಲಿ ದೇಶದ ನಾನಾ ಭಾಗಗಳಲ್ಲಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಟ್ಟದ ಪಠ್ಯ- ಪಠ್ಯೇತರ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕರಾವಳಿ ಭಾಗದ ಅತ್ಯುತ್ತಮ ಸಂಸ್ಥೆಯಾಗಿ ಅನೇಕ ಬಾರಿ ಚಾಂಪಿಯನ್ ಪಟ್ಟ ಪಡೆದಿದೆ.

ಒಡಂಬಡಿಕೆಗಳು
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ), ಎನ್‌ಆರ್‌ಎಸ್‌ಸಿ, ಚಂಢೀಗಡ್‌ನ ಎಸ್‌ಸಿಎಲ್, ಪುಣೆಯ ಡಿಐಟಿ, ಎಚ್‌ಎಎಲ್, ಬಿಇಎಲ್, ಬಿಎಮ್‌ಇಎಲ್, ಅಲಹಾಬಾದ್ ಐಐಐಟಿ, ಜಪಾನ್ ಕುಮೊಮೊಟೊ ವಿಶ್ವವಿದ್ಯಾಲಯ ಮುಂತಾದ ಸಂಸ್ಥೆಗಳೊಂದಿಗೆ ಒಡಂಬಡಿಗೆ ಮಾಡಿಕೊಳ್ಳಲಾಗಿದೆ.
ಪೇಟೆಂಟ್ಸ್ ಹಾಗೂ ಅನುದಾನ
►ಆಳ್ವಾಸ್‌ನ ೫ ವಿದ್ಯಾರ್ಥಿಗಳ ಹೆಸರಲ್ಲಿ ಪೇಟೆಂಟ್ಸ್
►ಕರ್ನಾಟಕ ಕೌನ್ಸಿಲ್ ಫಾರ್ ಟೆಕ್ನಿಕಲ್ ಅಪ್‌ಗ್ರೇಡೇಷನ್ (ಕೆಸಿಟಿಯು), ವಿಜನ್ ಗ್ರೂಪ್ ಆನ್ ಸೈನ್ಸ್ ಆಂಡ್ ಟೆಕ್ನಾಲಜಿ(ವಿಜಿಎಸ್ಟಿ), ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಆಂಡ್ ಟೆಕ್ನಾಲಜಿ(ಕೆಎಸ್ಸಿಎಸ್ಟಿ), ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನೆ(ಪಿಎಂಕೆವಿವೈ)ಗಳಿಂದ ಅನುದಾನಗಳನ್ನು ಪಡೆದುಕೊಳ್ಳಲಾಗಿದೆ.

ಬೆಸ್ಟ್ ಪ್ಲೆಸಮೆಂಟ್ ರೆಕಾರ್ಡ
►ಕರ್ನಾಟಕದಲ್ಲೆ ಅತೀ ಹೆಚ್ಚಿನ ಉದ್ಯೋಗಾವಕಾಶವನ್ನು ಕಲ್ಪಿಸುವ ಕಾಲೇಜು ಆವರಣ ಎಂಬ ಖ್ಯಾತಿ ಗಳಿಸಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜನಲ್ಲಿ ಪ್ರತಿಷ್ಠಿತ ಕಂಪೆನಿಗಳಾದ ಇವೈ, ಟೆಕ್ಸಿಸ್ಟಂ, ಐಬಿಎಂ ಲ್ಯಾಬ್, ರಿಫಿನಿಟಿವ್, ಸ್ಯಾಫ್ ಲ್ಯಾಬ್ಸ್, ಅಮೇಜಾನ್, ವಿಪ್ರೋ, ಟಿಸಿಎಸ್, ಇನ್ಪೋಸಿಸ್, ಸಿನೋಪ್ಸಿಸ್, ಒರ‍್ಯೇಕಲ್, ಎಂಫಸಿಸ್, ಏರೀಸ್ ಗ್ಲೋಬಲ್ ಕಂಪೆನಿಗಳು ಕಾಲೇಜಿನ ಆವರಣಕ್ಕಾಗಮಿಸಿ ಉದ್ಯೋಗಾವಕಾಶವನ್ನು ನೀಡುತ್ತಿವೆ. ಕಳೆದ ವರ್ಷ ಪ್ರತಿಷ್ಠಿತ ೨೩೯ ಕ್ಕೂ ಅಧಿಕ ಕಂಪೆನಿಗಳು ೫೮೬ಕ್ಕೂ ವಿಧ್ಯಾರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡಿವೆ.

ಇಂಟರ್ನ್‌ಶಿಪ್ ಹಾಗೂ ಟ್ರೈನಿಂಗ್
►ವಿದ್ಯಾರ್ಥಿಗಳಿಗೆ ಕಾರ್ಯ ಕ್ಷೇತ್ರದ ಅನುಭವ ದೊರೆಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಮೆಜಾನ್, ಇನ್ಫೋಸಿಸ್, ಡಿಫೆನ್ಸ್ ಇನ್ಸಿಟ್ಯೂಟ್ ಅಡ್ವಾನ್ಸ್ ಟೆಕ್ನಾಲಜಿ, ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿ., ಭಾರತ್ ಎಲೆಕ್ಟ್ರಾನಿಕ್ಸ್ ಲಿ., ಸಿನೋಪ್ಸಿಸ್‌ಗಳಂತಹ ಸಂಶೋಧನಾ ಸಂಸ್ಥೆಗಳು ಹಾಗೂ ಪ್ರಮುಖ ಕೈಗಾರಿಗಳಲ್ಲಿ ೪೫ಕ್ಕೂ ಅಧಿಕ ದಿನಗಳ ಕಾಲ ಇಂಟರ್ನ್‌ಶಿಪ್ ವ್ಯವಸ್ಥೆ
►ಪ್ರತಿವರ್ಷ ೧೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಇಂಟರ್ನಶಿಪ್‌ಗೆ ತೆರಳುತ್ತಿದ್ದು, ಇದು ಉದ್ಯೋಗ ಪಡೆಯಲು ಸಹಕಾರಿಯಾಗಿದೆ.
ಸಂಶೋಧನಾ ಪ್ರಯೋಗಾಲಯಗಳು
►ವಿದ್ಯಾರ್ಥಿಗಳಿಗೆ ಅನ್ವೇಷಣೆ ಹಾಗೂ ಉತ್ಪನ್ನ ಅಭಿವೃದ್ಧಿಗಾಗಿ ನೆರವಾಗಲು ೧೫ಕ್ಕೂ ಅಧಿಕ ಸಂಶೋಧನಾ ಪ್ರಯೋಗಲಯಗಳು.
►ಸ್ಟುಡೆಂಟ್ ಸ್ಟಾರ್ಟ್‌ಅಪ್ಸ್‌ಗಳಾಗಿ ಮೆಮ್ಸ್ , ಐಒಎಸ್ ಆಪ್‌ಲ್ ಡೆವಲಪ್‌ಮೆಂಟ್ ಲ್ಯಾಬ್, ಇನೋವೇಷನ್ ಲ್ಯಾಬ್, ಎನ್ವಿಷನ್ ಲ್ಯಾಬ್, ಸಿಎನ್‌ಸಿ ಲ್ಯಾಬ್, ಇ-ಯಂತ್ರ ರೊಬೋಟಿಕ್ಸ್ ಲ್ಯಾಬ್‌ನ್ನು ರಚಿಸಲಾಗಿದೆ.

ಪ್ರಗತಿ- ಬೃಹತ್ ಉದ್ಯೋಗ ಮೇಳ
ಭಾರತದ ಗ್ರಾಮೀಣ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ೨೦೦೮ರಲ್ಲಿ ಆರಂಭವಾದ ”ಆಳ್ವಾಸ್ ಪ್ರಗತಿ” ಉದ್ಯೋಗ ಮೇಳ ರಾಷ್ಟ್ರದಲ್ಲೆ ಪ್ರತಿಷ್ಠಿತ ಉದ್ಯೋಗ ಮೇಳವಾಗಿದೆ. ಪ್ರತಿವರ್ಷ ನಡೆಯುವ ಉದ್ಯೋಗ ಮೇಳಕ್ಕೆ ರಾಷ್ಟ್ರದ ೧೦೦೦ ಕಾಲೇಜುಗಳಿಂದ ಸುಮಾರು ೨೦೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಇದರಲ್ಲಿ ೫೦೦೦ ವಿದ್ಯಾರ್ಥಿಗಳು ಶಾರ್ಟ್ ಲಿಸ್ಟ್ ಆಗಿ ಸುಮಾರು ೨೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಕಂಪೆನಿಗಳಿಗೆ ನೇಮಕವಾಗುತ್ತಾರೆ.

ಉದ್ಯಮಶೀಲತಾ ಅಭಿವೃದ್ಧಿ ಘಟಕ
ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ೨೦೧೬ರಲ್ಲಿ ಆರಂಭವಾದ ಈ ಉದ್ಯಮಶೀಲತಾ ಅಭಿವೃದ್ಧಿ ಘಟಕ ಈಗಾಗಲೇ ಹೊಮ್ಝಾ ಹಾಗೂ ವರ್ಬಲರ್ ಎಂಬ ಎರಡು ಸ್ಟುಡೆಂಟ್ ಸ್ಟಾರ್ಟ್ ಅಪ್ಸ್ ಚಟುವಟಿಕೆಗೆ ಸಹಕಾರಿಯಾಗಿ ಇನ್ನೂ ಎರಡು ಹೊಸ ಪ್ರಾಜೆಕ್ಟ್‌ಗಳ ಪ್ರಾರಂಭಕ್ಕೆ ಪ್ರೋತ್ಸಾಹಿಸುತ್ತಿದೆ.

ಇಸ್ರೋ ಕೊಡುಗೆ:
ಆಳ್ವಾಸ್ ಇಂಜಿನಿಯರ್ ಕಾಲೇಜಿನ ಪ್ರಗತಿಯನ್ನು ಗಮನಿಸಿ, ಭಾರತೀಯ ಬಾಹ್ಯಾಕಾಶ ಸಂಶೋದನ ಸಂಸ್ಥೆ (ಇಸ್ರೋ)ಅತ್ಯಂತ ವೈಜ್ಞಾನಿಕ ತಂತ್ರಜ್ಞಾನವಾದ ಗ್ಲೊಬಲ್ ನೇವಿಗೇಶನ್ ಸೆಟಲೈಟ್ ಸಿಸ್ಟಂ ಹಾಗೂ ಅಟೋಮೇಟಿಕ್ ವೆದರ್ ಸ್ಟೇಷನ್‌ನ್ನು ಕಾಲೇಜಿನ ಆವರಣಕ್ಕೆ ಕೊಡುಗೆಯಾಗಿ ನೀಡಿದೆ. ಅಲ್ಲದೆ ಇಸ್ರೋ ಸಹಯೋಗದೊಂದಿಗೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಕರಾವಳಿ ಕರ್ನಾಟಕದ ಮೀನುಗಾರರಿಗೆ ಸಹಾಯವಾಗಲೆಂದು ಜಿಪಿಎಸ್ ಆಧಾರಿತ ನಾವಿಕ್ ಕಿಟ್ ಮತ್ತು ಆಪ್‌ನ್ನು ಅಭಿವೃದ್ಧಿ ಪಡೆಸಿ ಯಶಸ್ವಿಯಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೆಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ‍್ಯ ಡಾ ಪೀಟರ್ ಫೆರ್ನಾಂಡೀಸ್ ಉಪಸ್ಥಿತರಿದ್ದರು.

Exit mobile version