ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ಉತ್ತರದಾಯಿತ್ವಗಳು ಪ್ರತಿಯೊಬ್ಬರ ಆಲೋಚನೆಗಳನ್ನು ಭಿನ್ನವಾಗಿಸುತ್ತದೆ. ವಿದ್ಯಾರ್ಥಿಗಳು ಯಾವಾಗಲೂ ನಕಾರಾತ್ಮಕ ವಿಷಯಗಳಿಗೆ ಕಿವಿಗೊಡದೆ, ಧನಾತ್ಮಕ ವಿಚಾರಗಳತ್ತ ಗಮನಹರಿಸಿದರೆ ಅವರೊಳಗಿನ ಮಾನಸಿಕ ತುಮುಲಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಂತಾರಾಷ್ಟ್ರೀಯ ಖ್ಯಾತೀಯ ವಾಗ್ಮಿ ದೀಕ್ಷಿತ್ ಪರಶ್ಶಿನಿ ಹೇಳಿದರು.
ಆಳ್ವಾಸ್ ಕಾಲೇಜಿನ ಮನಃಶಾಸ್ತ್ರ ವಿಭಾಗದ ಸೈಕಾಲಜಿ ಸ್ಟುಡೆಂಟ್ ಕೌನ್ಸಿಲ್ ’EUNOIA’ ವತಿಯಿಂದ ಹಮ್ಮಿಕೊಂಡಿದ್ದ ’ಲೈಫ್ ಈಸ್ ಪಾಸಿಟಿವ್’ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು.
ಜೀವನದಲ್ಲಿ ಸೋಲನ್ನು ಗೆಲ್ಲಬೇಕೆಂಬ ಹಠವಿದ್ದರೆ ಸಮಸ್ಯೆಗಳೇ ಇರುವುದಿಲ್ಲ. ಎಲ್ಲಿ ನಾವು ಸೋಲನ್ನು ಒಪ್ಪಿಕೊಂಡು, ನಕಾರಾತ್ಮಕ ಭಾವನೆಯಿಂದ ಮುಂದುವರಿಯುತ್ತೇವೆಯೋ ಅಲ್ಲಿ ನಾವು ನಿಜವಾಗಿ ಸೋಲನ್ನು ಕಾಣುತ್ತೇವೆ ಎಂದರು.
ಮೋಟಿವೇಶನ್ ಪಾಠಗಳು ಬದುಕಿಗೆ ಹೊಸ ತಿರುವುಗಳನ್ನು ಕೊಡುವುದು ಸತ್ಯ.. ಆದರೆ, ಇಂದಿನ ದಿನಗಳಲ್ಲಿ ಮೋಟಿವೇಶನ್ ತರಗತಿಗಳು ಮನರಂಜನೆಯ ರೂಪವನ್ನು ಪಡೆದುಕೊಳ್ಳುತ್ತಿದೆ. ಮಗು ಹುಟ್ಟುವಾಗ ಎಷ್ಟು ಮುಗ್ಧವಾಗಿರುತ್ತೋ, ಆ ಮುಗ್ಧತೆಯು ಮರಣದವರೆಗೂ ನಮ್ಮೊಳಗಿದ್ದರೆ ಎಲ್ಲರ ಮನಗಳನ್ನೂ ಗೆಲ್ಲಲು ಸಾಧ್ಯವಾಗುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಧೃಢರನ್ನಾಗಿಸುವಲ್ಲಿ ಇಂತಹ ಕಾರ್ಯಕ್ರಮಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಈ ನಿಟ್ಟಿನಲ್ಲಿ ಇUಓಔIಂ ಹಮ್ಮಿಕೊಂಡ ಈ ಕಾರ್ಯಕ್ರಮ ಶ್ಲಾಘನೀಯ. ವಿದ್ಯಾರ್ಥಿಗಳ ಪ್ರಯತ್ನ ಅಭಿನಂದನೀಯವಾದುದು ಎಂದರು.
ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸೈಕಾಲಜಿ ಸ್ಟುಡೆಂಟ್ ಕೌನ್ಸಿಲ್ ಅಧ್ಯಕ್ಷ ಪ್ರಣವ್, ವಿದ್ಯಾರ್ಥಿನಿ ಚುಮ್‌ತಾನ್ ಉಪಸ್ಥಿತರಿದ್ದರು. ಆಳ್ವಾಸ್ ಪದವಿ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಜೋಶ್ವಿತಾ ಡಿಸೋಜ ಸ್ವಾಗತಿಸಿದರು. ಪ್ರಾಧ್ಯಾಪಕಿ ಅಂಜಿತಾ ನಿರ್ಮಲ್ ವಂದಿಸಿದರು. ವಿದ್ಯಾರ್ಥಿನಿ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.