ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಜಾತಿ, ಮತ ಬೇಧವಿಲ್ಲದೆ ಎಲ್ಲರೂ ಪ್ರೀತಿ ವಿಶ್ವಾಸದಿಂದ ಭಜನೆ ಮಾಡಬೇಕು ಹಾಗೂ ಊರಿನ ಸ್ವಾಸ್ಥ್ಯವನ್ನು ಕಾಪಾಡಬೇಕು. ದೇವರ ಅನುಗ್ರಹ ಪ್ರಾಪ್ತಿಗೆ ಭಜನೆ ಸರಳ ಮಾರ್ಗವಾಗಿದೆ. ಶ್ರೀ ಇಂದುಧರ ದೇವಸ್ಥಾನದ ವತಿಯಿಂದ ಭಜನೆಯಿಂದ ದೇವರೆಡೆಗೆ ಎಂಬ ಪರಿಕಲ್ಪನೆಯೊಂದಿಗೆ ಆಯೋಜಿಸಲಾಗಿರುವ ನಗರ ಭಜನೆ ಕಾರ್ಯಕ್ರಮದಿಂದ ಊರಿನ ಸಾಮರಸ್ಯ ಉತ್ತಮವಾಗಿ, ಸಂಘಟನೆ ಹಾಗೂ ನಾಯಕತ್ವ ಬೆಳೆಯಬೇಕು ಎಂದು ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಶಿವಾನಂದ ಪೂಜಾರಿ ಹೇಳಿದರು.
ಅಮೃತ ಮಹೋತ್ಸವ ವರ್ಷಾಚರಣೆಯ ಸಂಭ್ರಮದಲ್ಲಿರುವ ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಶುಕ್ರವಾರ ಸಂಜೆ ಜರಗಿದ ’ಭಜನೆಯಿಂದ ದೇವರೆಡೆಗೆ’ ಬೃಹತ್ ನಗರ ಭಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀ ಇಂದುಧರ ದೇವಸ್ಥಾನದ ಬಳಿಯಿಂದ ಆರಂಭಗೊಂಡ ’ಭಜನೆಯಿಂದ ದೇವರೆಡೆಗೆ’ ಬೃಹತ್ ನಗರ ಭಜನೋತ್ಸವ ಶ್ರೀ ವೀರೇಶ್ವರ ದೇವಸ್ಥಾನದವರೆಗೆ ಸಾಗಿ ಸಮಾಪನಗೊಂಡಿತು. ವಿವಿಧ ಭಜನಾ ಮಂಡಳಿಗಳ ಸಹಕಾರದೊಂದಿಗೆ ವಿಜೃಂಭಣೆಯಿಂದ ಜರಗಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಸಮಾಜ ಸೇವಕ ಜಿ.ಗಣಪತಿ ಶಿಪಾ, ಕೃಷ್ಣ ಪೂಜಾರಿ, ಮತ್ಸ್ಯೋದ್ಯಮಿ ಮಂಜುನಾಥ ಜಿ.ಟಿ., ಜಿ.ಪುರುಷೋತ್ತಮ ಆರ್ಕಾಟಿ, ಜಗದೀಶ ನಾಯಕವಾಡಿ, ನರಸಿಂಹ ಕೆ., ದೇವಸ್ಥಾನದ ಅಧ್ಯಕ್ಷ ಸುಂದರ ಜಿ., ಉಪಾಧ್ಯಕ್ಷ ಸುರೇಶ ಜಿ., ಕಾರ್ಯದರ್ಶಿ ಶ್ರೀನಿವಾಸ, ನಾಗಿಣಿ, ಸುಮಿತ್ರಾ, ಮಮತಾ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.