Kundapra.com ಕುಂದಾಪ್ರ ಡಾಟ್ ಕಾಂ

ಪ್ಲಾಸ್ಟಿಕ್ ಮುಕ್ತ ವಂಡ್ಸೆ ಗ್ರಾಮ ಅನುಷ್ಠಾನಕ್ಕೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೊಲ್ಲೂರು:  ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ ಸಚಿವಾಲಯದ ಅಧಿಸೂಚನೆಯಂತೆ ಉಡುಪಿ ಜಿಲ್ಲಾ ಪಂಚಾಯತ್ ಕರ್ನಾಟಕ ರಾಜ್ಯ ಸರಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸುತ್ತೋಲೆಯಂತೆ ಪ್ಲಾಸ್ಟಿಕ್ ಮುಕ್ತ ಉಡುಪಿ ಜಿಲ್ಲೆ ಮಾಡುವ ಉದ್ಧೇಶದಿಂದ ಮೊದಲ ಹಂತದಲ್ಲಿ ಉಡುಪಿ ಜಿಲ್ಲೆಯ ಆರು ಗ್ರಾಮ ಪಂಚಾಯತ್‌ಗಳನ್ನು ಆಯ್ಕೆ ಮಾಡುಕೊಂಡು ನಿಷೇಧಿತ ಪ್ಲಾಸ್ಟಿಕ್‌ನ್ನು ಕಡ್ಡಾಯವಾಗಿ ನಿರ್ಬಂಧಿಸಿ, ಪರಿಣಾಮಕಾರಿ ಅನುಷ್ಟಾನಕ್ಕೆ ಯೋಜನೆ ರೂಪಿಸಿದ್ದು, ಆಯ್ದ ಆರು ಪಂಚಾಯತ್‌ಗಳಲ್ಲಿ ಒಂದಾದ ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜ.26ರಂದು ಪ್ಲಾಸ್ಟಿಕ್ ಮುಕ್ತಗ್ರಾಮ ಘೋಷಣೆ ಮಾಡಲಾಗಿದ್ದು, ನೋಡೆಲ್ ಅಧಿಕಾರಿಗಳಿಂದ ಅಂಗಡಿ-ಮುಂಗಟ್ಟುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಫೆ.6ರಂದು ವಂಡ್ಸೆಯಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿರುವ ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ|ನಾಗಭೂಷಣ ಉಡುಪ ಅವರ ನೇತೃತ್ವದಲ್ಲಿ ಜನತೆಯಲ್ಲಿ ಅರಿವು ಮೂಡಿಸಲಾಯಿತು. ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ, ಬಳಕೆ ಮತ್ತು ವಿತರಣೆ ಮಾಡಿದರೆ ಗ್ರಾಮ ಪಂಚಾಯತ್ ಬೈಲಾದಂತೆ ದಂಡ ವಿಧಿಸುವುದು, ಮುಂದೆಯೂ ಉಲ್ಲಂಘಿಸಿದರೆ ಭಾರತ ಸರಕಾರದ ಅಧಿಸೂಚನೆ ಸಂ.ಎಸ್.ಓ.394 (ಇ) ಸಂಬಂಧಪಟ್ಟ ನ್ಯಾಯಾಲಯದಲ್ಲಿ ಪರಿಸರ (ಸಂರಕ್ಷಣೆ) ಕಾಯಿದೆ 1986 ಸೆಕ್ಷನ್ 19ರ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಲ್ಲ ಅಂಗಡಿ, ವಾಣಿಜ್ಯ ಮಳಿಗೆಯವರಿಗೆ ತಿಳಿಸಲಾಯಿತು.

ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಭೇಟಿ ಮಾಡಿ ಜಾಗೃತಿ ಮೂಡಿಸಲು ಮೂವರನ್ನು ನಿಯೋಜಿಸಲಾಗಿದ್ದು, ಪ್ರತಿಮನೆಗೇ ಒಂದು ಬಟ್ಟೆ ಕೈಚೀಲವನ್ನು ನೀಡಿ, ಅವರು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವಂತೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಸದಸ್ಯ ಉದಯ ಕೆ ನಾಯ್ಕ್, ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ರೂಪಾ ಗೋಪಿ, ಕಾರ್ಯದರ್ಶಿ ಶಂಕರ ಆಚಾರ್ಯ, ಎಸ್.ಎಲ್.ಆರ್.ಎಂ.ಮೇಲ್ವಿಚಾರಕಿ ವಿಜಯಲಕ್ಷ್ಮೀ, ಗ್ರಾ.ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version