ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಂದು ಹೇಳಬೇಕಾದ್ದನ್ನು ನೇರವಾಗಿ ಹೇಳುವ, ವಿರೋಧಿಸಬೇಕಾದ್ದನ್ನು ಸ್ಪಷ್ಟ ಧ್ವನಿಯಲ್ಲಿ ವಿರೋಧಿಸುವ ಸ್ವಾತಂತ್ರ್ಯ ಕಳೆದುಕೊಂಡಿದ್ದೇವೆ. ಸ್ವತಂತ್ರರು ಎನ್ನುತ್ತಲೇ ಬಂಧಿಗಳಾಗಿಯೇ ಬದುಕುತ್ತಿದ್ದೇವೆ. ಇಂತಹ ಸಂಧಿಗ್ಧತೆಯ ನಡುವೆ ಗಟ್ಟಿಯಾದ ಧನಿಯಲ್ಲಿ ವಿವರಿಸುವ, ಒಪ್ಪುವ ಹಾಗೂ ವಿರೋಧಿಸುವ ಶಕ್ತಿಯಿರುವುದು ಕಲಾ ಮಾಧ್ಯಮಕ್ಕೆ ಮಾತ್ರ ಎಂದು ಮಂಗಳೂರು ಅರೆಹೊಳೆ ಪ್ರತಿಷ್ಠಾನದ ಅರೆಹೊಳೆ ಸದಾಶಿವ ರಾವ್ ಹೇಳಿದರು.
ಅವರು ಪರಿಶಿಷ್ಟ ಪಂಗಡದ ರಂಗತಂಡ ಸಂಚಲನ ರಿ. ಹೊಸೂರು ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ಹೊಸೂರಿನ ಕೆ.ವಿ ಸುಬ್ಬಣ್ಣ ವನರಂಗದಲ್ಲಿ ಆಯೋಜಿಸಲಾದ ಹನ್ನೆರಡನೇ ವರ್ಷದ ವಾರ್ಷಿಕ ಸಂಭ್ರಮ ವನಸಿರಿಯಲ್ಲೊಂದು ರಂಗಸುಗ್ಗಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಹಿಂದಿನಿಂದಲೂ ಕಲೆಯನ್ನು ಬೆಳೆಸಿಕೊಂಡು ಬಂದ್ದದ್ದು ಶ್ರಮಿಕ ವರ್ಗ. ಗ್ರಾಮೀಣ ಪ್ರದೇಶಗಳಲ್ಲಿ ಗಟ್ಟಿಯಾಗಿ ಉಳಿದುಕೊಂಡಿದೆ. ಕಲೆ ಸರ್ವವ್ಯಾಪಿಯಾಗಿದ್ದು ಸಮಾಜಕ್ಕೆ ಎಲ್ಲವನ್ನೂ ಸಶಕ್ತವಾಗಿ ತಲುಪಿಸುವ ಶಕ್ತಿ ಹೊಂದಿದೆ ಎಂದರು.
ಸಹಕಾರಿ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್. ರಾಜು ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತ್ಯಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಡಿ. ಆರ್., ಮಾಜಿ ಗ್ರಾಮ ಪಂಚಾಯತ್ ಸದಸ್ಯ ಶೇಷು ಪೂಜಾರಿ, ಬೈಂದೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹೆರಿಯ ಪೂಜಾರಿ, ಹೊಸೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶೇಷ ಮರಾಠಿ ಸಂಚಲನ ಹೊಸೂರು ಗೌರವಾಧ್ಯಕ್ಷ ತಿಮ್ಮ ಮರಾಠಿ, ಅಧ್ಯಕ್ಷ ಮಹಾದೇವ ಮರಾಠಿ ಉಪಸ್ಥಿತರಿದ್ದರು.
ಸಂಚಾಲಕ ಸುಧಾಕರ ಪಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರಾಜು ಮರಾಠಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ವಾಸುದೇವ ಮರಾಠಿ, ಖಜಾಂಚಿ ನಾಗಪ್ಪ ಮರಾಠಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಗಳೂರು ನಂದಗೋಕುಲ ಕಲಾವಿದರು ಪ್ರಸ್ತುತಪಡಿಸಿದ ಕಂಸಾಯಣ ನಾಟಕ ಪ್ರದರ್ಶನಗೊಂಡಿತು.