Kundapra.com ಕುಂದಾಪ್ರ ಡಾಟ್ ಕಾಂ

ಎಸ್.ಎಲ್.ಆರ್.ಎಂ. ಘಟಕಕ್ಕೆ ವಿದ್ಯಾರ್ಥಿಗಳ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಗಂಗೊಳ್ಳಿಯ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್‌ನ ವಿದ್ಯಾರ್ಥಿಗಳು ಗಂಗೊಳ್ಳಿ ಗ್ರಾಮದ ಎಸ್.ಎಲ್.ಆರ್.ಎಂ. ಘಟಕಕ್ಕೆ ಗುರುವಾರ ಭೇಟಿ ನೀಡಿದರು.

ಎಸ್.ಎಲ್.ಆರ್.ಎಂ. ಘಟಕದಲ್ಲಿ ಘನ ಮತ್ತು ದ್ರವ ತ್ಯಾಜ್ಯಗಳನ್ನು ವಿಂಗಡಿಸಿ, ಸ್ವಚ್ಛಗೊಳಿಸುವ ವಿಧಾನ, ಘಟಕದ ಕಾರ್ಯನಿರ್ವಹಣೆ, ತ್ಯಾಜ್ಯ ಸಂಗ್ರಹ ಮತ್ತಿತರ ಚಟುವಟಿಕೆಗಳನ್ನು ವೀಕ್ಷಿಸಿ, ಇದರ ಸಮಗ್ರ ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಗ್ರಾಪಂ ಸಿಬ್ಬಂದಿ ಉದಯಕುಮಾರ್, ಸ್ವಚ್ಛ ಸುಂದರ ಪರಿಸರ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ನಾವು ಮನೆಯಲ್ಲಿರುವ ತ್ಯಾಜ್ಯಗಳನ್ನು ನದಿ, ಸಮುದ್ರಕ್ಕೆ ಎಸೆಯುವುದರಿಂದ ಜಲಚರಗಳಿಗೆ ಹಾನಿಯಾಗುತ್ತದೆ. ನೀರು ಮಲಿನವಾಗಿ ಕಾಯಿಲೆ ಬರುವ ಸಾಧ್ಯತೆ ಇದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದ ಅವರು, ಎಸ್.ಎಲ್.ಆರ್.ಎಂ ಘಟಕದ ಕಾರ್ಯ ನಿರ್ವಹಣೆ, ತ್ಯಾಜ್ಯಗಳನ್ನು ಬೇರ್ಪಡಿಸಿ ಸ್ವಚ್ಛಗೊಳಿಸುವುದು, ತ್ಯಾಜ್ಯ ಸಂಗ್ರಹಣೆ ವಿಧಾನ ಮತ್ತಿತರ ವಿಷಯಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕಿ ಝೀಟಾ ರೆಬೆರೊ, ನೋಡೆಲ್ ಶಿಕ್ಷಕ ಅಣ್ಣಪ್ಪ ಶೆಟ್ಟಿ ಎಚ್. ಮತ್ತಿತರರು ಉಪಸ್ಥಿತರಿದ್ದರು. ಕೊನೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಸ್ವಚ್ಛ ಪರಿಸರದ ಪ್ರತಿಜ್ಞೆ ಸ್ವೀಕರಿಸಿದರು.

Exit mobile version