Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಪೂರ್ವಭಾವಿ ಶಾಂತಿ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಹೋಳಿ ಹಬ್ಬದ ಆಚರಣೆ ಶಾಂತಿಯುತವಾಗಿರಬೇಕು. ಮೋಜು ಮಸ್ತಿ ಅಬ್ಬರದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು. ಮೆರವಣಿಗೆಯಲ್ಲಿ ಬಣ್ಣ ಎರಚುವಾಗ ಕೇವಲ ಔಪಚಾರಿಕವಾಗಿ ಮಾತ್ರ ಬಣ್ಣ ಹಾಕಬೇಕು. ಬಲಾತ್ಕಾರವಾಗಿ, ಹಿಂಸಾತ್ಮವಾಗಿ ಬಣ್ಣ ಎರಚಬಾರದು. ಅನ್ಯ ಧರ್ಮದವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಹೋಳಿ ಆಚರಣೆ ಮಾಡಬೇಕು. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುರೇಶ ನಾಯ್ಕ್ ಹೇಳಿದರು.

ಹೋಳಿ ಹಬ್ಬದ ಪೂರ್ವಭಾವಿಯಾಗಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಜರಗಿದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಮದ್ಯಪಾನ ಸೇವಿಸಿ ಮೆರವಣಿಗೆಯಲ್ಲಿ ಭಾಗವಹಿಸುವುದನ್ನು ತಡೆಯಬೇಕು. ನಿಗದಿತ ವೇಳೆಯಲ್ಲಿ ಮೆರವಣಿಗೆಯನ್ನು ನಡೆಸಿ ಇಲಾಖೆಯೊಂದಿಗೆ ಸಹಕರಿಸಬೇಕು. ಏನೇ ತೊಂದರೆ ಆದರೂ ಇಲಾಖೆಯ ಗಮನಕ್ಕೆ ತರಬೇಕು. ಕಾನೂನು ಕೈಗೆತ್ತಿಕೊಳ್ಳುವ ಕೆಲಸಕ್ಕೆ ಯಾರೂ ಮುಂದಾಗಬಾರದು ಎಂದು ಅವರು ಕರೆ ನೀಡಿದರು.

ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಭೀಮಾಶಂಕರ್ ಸಲಹೆ ಸೂಚನೆ ನೀಡಿ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.

ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ರಾಮಪ್ಪ ಖಾರ್ವಿ, ರಾಮದಾಸ ಪಟೇಲ್, ನಾಗಪ್ಪಯ್ಯ ಪಟೇಲ್, ಕೃಷ್ಣ ಪಟೇಲ್, ಯೂನಿಸ್ ಸಾಹೇಬ್, ಗಣಪತಿ ಪಟೇಲ್, ರಾಘವೇಂದ್ರ ಪಟೇಲ್, ಗಂಗಾಧರ ಖಾರ್ವಿ, ಸತೀಶ ಖಾರ್ವಿ, ಮಂಜುನಾಥ ಖಾರ್ವಿ, ಜಯಕರ ಖಾರ್ವಿ ಕಂಚುಗೋಡು, ಶೀನ ಪಟೇಲ್, ಖಲೀಲ್, ಇಮ್ರಾನ್, ಉಸಾಮಾ, ರಜಬ್ ಮತ್ತಿತರರು ಉಪಸ್ಥಿತರಿದ್ದರು.

ಎಎಸ್‌ಐ ರಘುರಾಮ ಸ್ವಾಗತಿಸಿದರು. ಹೆಡ್ ಕಾನ್‌ಸ್ಟೇಬಲ್ ಗಿರೀಶ್ ವಂದಿಸಿದರು.

Exit mobile version