Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಬಂದರು ಬೇಲಿಕೇರಿ ರಸ್ತೆಯ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಗಂಗೊಳ್ಳಿ ಬಂದರು ಬೇಲಿಕೇರಿ ಜನರ ಹಲವು ದಶಕಗಳ ಪ್ರಾಮಾಣಿಕ ಹೋರಾಟದ ಫಲವಾಗಿ ಬೇಲಿಕೇರಿ ರಸ್ತೆ ಕಾಂಕ್ರೀಟಕರಣಕ್ಕೆ ವಾರಾಹಿ ನೀರಾವರಿ ನಿಗಮದ ಮೂಲಕ ಅನುದಾನ ಮಂಜೂರಾಗಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಗಂಗೊಳ್ಳಿಯ ಮಲ್ಯರಬೆಟ್ಟು ಮತ್ತು ರಥಬೀದಿ ಅಡ್ಡರಸ್ತೆ ಹಾಗೂ ಮುಖ್ಯರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾಗಿದ್ದು, ಕಾಮಗಾರಿಯನ್ನು ಅತಿ ಶೀಘ್ರ ಪ್ರಾರಂಭಿಸಲು ಸೂಚನೆ ನೀಡಲಾಗುವುದು ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.

ಗಂಗೊಳ್ಳಿ ಗ್ರಾಮದ ಬಂದರು ಬೇಲಿಕೇರಿ ರಸ್ತೆಯ ಸುಮಾರು 25 ಲಕ್ಷ ರೂ. ವೆಚ್ಚದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗಂಗೊಳ್ಳಿಯ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ನೀಡಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು. ಈ ಭಾಗದ ಜನರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸಲು ಶಕ್ತಿಮೀರಿ ಪ್ರಯತ್ನ ನಡೆಸುವುದಾಗಿ ಅವರು ಭರವಸೆ ನೀಡಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಗ್ರಾಪಂ ಸದಸ್ಯರಾದ ಮಂತಿ ಶ್ರೀನಿವಾಸ ಖಾರ್ವಿ, ಅರುಣ್ ಪೂಜಾರಿ, ಬಿ.ಲಕ್ಷ್ಮೀಕಾಂತ ಮಡಿವಾಳ, ಬಿ.ಗಣೇಶ ಶೆಣೈ, ಬಿ.ರಾಘವೇಂದ್ರ ಪೈ, ನಾಗರಾಜ ಖಾರ್ವಿ ಗುಡ್ಡೆಕೇರಿ, ಸಾವಿತ್ರಿ ಖಾರ್ವಿ, ನಾಗರಾಜ ಖಾರ್ವಿ ಪಿ.ಬಿ., ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಗ್ರಾಪಂ ಮಾಜಿ ಸದಸ್ಯ ರಾಮಪ್ಪ ಖಾರ್ವಿ, ಗುಜ್ಜಾಡಿ ಗ್ರಾಪಂ ಸದಸ್ಯ ಹರೀಶ ಮೇಸ್ತ, ರಾಮಚಂದ್ರ ಮಂಜ, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version