Site icon Kundapra.com ಕುಂದಾಪ್ರ ಡಾಟ್ ಕಾಂ

ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ವಿಶ್ವ ಮಹಿಳಾ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಪುರುಷ ಪ್ರಧಾನ ವ್ಯವಸ್ಥೆ ಬದಲಾಗಿದೆ. ಸಾಮಾಜಿಕವಾಗಿ ಮಹಿಳೆ ಬಹುಮುಖಿ ನೆಲೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದರ ಜತೆಗೆ ಯಶಸ್ಸನ್ನು ಕಂಡಿದ್ದಾಳೆ. ಮಹಿಳೆ ಹಠವಾದಿ ಮಾತ್ರವಲ್ಲ ಛಲವಾದಿ ಎಂದು ಜೇಸಿಐ 15 ವಲಯಾಧ್ಯಕ್ಷ ಕೆ. ಕಾರ್ತಿಕೇಯ ಮಧ್ಯಸ್ಥ ಹೇಳಿದರು .

ಅವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ವೇದಿಕೆ ಹಾಗೂ ಕುಂದಾಪುರ ಸಿಟಿ ಜೇಸಿಐ ಅವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ‘ಸಮ್ಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿದರು .

ಇದೇ ಸಂದರ್ಭದಲ್ಲಿ ಸಾರ್ವಜನಿಕ ಸೇವಾ ಕ್ಷೇತ್ರದ ಸಾಧನೆಗಾಗಿ ಕುಂದಾಪುರದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಇಂದಿರಾ, ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ| ಅಮ್ಮಾಜಿ, ಕಾಲೇಜಿನ ಕ್ರೀಡಾ ಪ್ರತಿಭೆ ತೃತೀಯ ಬಿ.ಕಾಂ. ಬಿ ವಿಭಾಗದ ರೂಪಾ ಶೆಟ್ಟಿ, ರಂಗಭೂಮಿ ಪ್ರತಿಭೆ ತೃತೀಯ ಬಿ.ಬಿ.ಎ. ಪೌರ್ಣಮಿ, ಶೈಕ್ಷಣಿಕ ಪ್ರತಿಭೆ ದ್ವಿತೀಯ ಬಿ.ಸಿ.ಎ. ಕಾವ್ಯ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಡಾ| ಅಮ್ಮಾಜಿ ಅವರು ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿಯೇ ಹೆಣ್ಣು ವಿವಿಧ ನೆಲೆಯಲ್ಲಿ ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಳ್ಳಬೇಕು. ಆತ್ಮಸ್ಥೈರ್ಯ ಮತ್ತು ನಿಷ್ಠೆಯಿಂದ ಏನನ್ನು ಬೇಕಾದರೂ ಸಾಧನೆ ಮಾಡಬಹುದು. ಹೆಣ್ಣು ಮಕ್ಕಳಿಗೆ ಪೋಷಕರು ಮತ್ತು ಹೆತ್ತವರ ಬೆಂಬಲವೂ ಅತಿ ಮುಖ್ಯ. ನನ್ನ ಮನೆಯವರ ನೆರವಿನಿಂದ ನನಗೆ ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜೇಸಿಐ ವಲಯ 15 ಜೇಸಿರೆಟ್ ವಿಭಾಗದ ವಲಯ ನಿರ್ದೇಶಕರಾದ ಜ್ಯೋತಿ ರಮಾನಾಥ ಶೆಟ್ಟಿ, ಕುಂದಾಪುರ ಸಿಟಿ ಜೇಸಿಐ ಅಧ್ಯಕ್ಷ ನಾಗೇಶ ನಾವಡ, ಕುಂದಾಪುರ ಸಿಟಿ ಜೇಸಿಐ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಜೇಸಿಐ ವಲಯ 15ರ ಪ್ರಥಮ ಮಹಿಳೆ ಶಿಲ್ಪಾ ಮಧ್ಯಸ್ಥ, ಜೇಸಿರೆಟ್ ಅಧ್ಯಕ್ಷೆ ರೇಖಾ, ಕಾಲೇಜಿನ ಮಹಿಳಾ ವೇದಿಕೆ ಸಹ ಸಂಯೋಜಕಿ ಸುಜಾತಾ ಉಪಸ್ಥಿತರಿದ್ದರು.

ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು, ಮಹಿಳಾ ವೇದಿಕೆಯ ಸಂಯೋಜಕಿ ತಿಲಕ ಲಕ್ಷ್ಮಿ ಎಮ್ ಕೆ. ವಂದಿಸಿದರು, ವಿದ್ಯಾರ್ಥಿನಿ ರಾನಿಯ ಸುಲ್ತಾನ ಕಾರ್ಯಕ್ರಮ ನಿರೂಪಿಸಿದರು.

Exit mobile version