ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮ್ಮಜ್ಞಾನದ ಪರಿಧಿಯನ್ನು ಒಂದೇ ವಿಷಯಕ್ಕೆ ಸೀಮಿತವಾಗಿಸದೇ ಎಲ್ಲ ವಿಚಾರಗಳನ್ನು ಅರಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮೈಸೂರಿನ ಪ್ರಜಾವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕ ಡಾ. ಗಣೇಶ್ ಅಮೀನ್‌ಗಡ ಹೇಳಿದರು.
ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಿಂದ ಅಲಂಗಾರಿನ ಪಂಡಿತ್ ರೆಸಾರ್ಟ್‌ನಲ್ಲಿ ಆಯೋಜಿಸಲಾದ ಒಂದು ದಿನದ ಬರಹ ಕೌಶಲ ಕಾರ್ಯಗಾರದಲ್ಲಿ ಮಾತನಾಡಿದರು.
ಸತತ ಓದು ಹಾಗೂ ಜಿಜ್ಞಾಸೆಯ ಮನೋಭಾವದಿಂದ ಬರವಣಿಗೆ ಸಾಧ್ಯ. ಪ್ರತಿಯೊಬ್ಬರೂ ತಮ್ಮದೇ ಶೈಲಿಯ ಬರವಣಿಗೆ ಬೆಳೆಸಿಕೊಳ್ಳಬೇಕು. ವಿವಿಧ ಪತ್ರಿಕೆಯ ಅಂಕಣಗಳಿಗೆ ತಮ್ಮ ಬರಹಗಳನ್ನು ಕಳುಹಿಸಬೇಕು. ಆಗ ಮಾತ್ರ ಪತ್ರಿಕೋದ್ಯಮದಲ್ಲಿ ತಮ್ಮ ಛಾಪನ್ನು ಮೂಡಿಸಬಹುದು. ಓದುಗನನ್ನು ಓದಿಸಿಕೊಂಡು ಹೋಗುವಂತಹ ಬರವಣಿಗೆ ರೂಢಿಸಿಕೊಂಡಾಗ ಮಾತ್ರ ಉತ್ತಮ ಬರಹಗಾರನಾಗಲು ಸಾಧ್ಯ ಎಂದರು.
ರೆಸಾರ್ಟ್‌ನ ಸುತ್ತಮುತ್ತಲಿರುವ ಪರಿಸರದಲ್ಲಿರುವ ವಿಷಯಗಳ ಕುರಿತು ತಮ್ಮದೇ ಶೈಲಿಯಲ್ಲಿ ಬರೆಯುವ ಪ್ರಾಯೋಗಿಕ ಚಟುವಟಿಕೆ ನಡೆಸಲಾಯಿತು.
ಆರ್ಗನ್ ಡೊನೇಶನ್ ಇಂಡಿಯಾ ಫೌಂಡೇಶನ್‌ನ ಅಧ್ಯಕ್ಷ ಲಾಲ್‌ಗೋಯಲ್ ವಿದ್ಯಾರ್ಥಿಗಳಿಗೆ ಅಂಗದಾನದ ಮಹತ್ವ ತಿಳಿಸಿದರು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಅಂಗದಾನದ ಬಗ್ಗೆ ಧನಾತ್ಮಕ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಗ್ಲೋಬಲ್ ಟಿವಿಯ ನಿರ್ದೇಶಕ ಎನ್.ವಿ.ಪೌಲೋಸ್, ನ್ಯೂಸ್ ಕರ್ನಾಟಕದ ಸದಸ್ಯ ರೆನಾಲ್ಡ್ ಸನ್ನಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ ಪೆಜತ್ತಾಯ, ವಿಭಾಗದ ಉಪನ್ಯಾಸಕರಾದ ಶ್ರೀಗೌರಿ ಎಸ್. ಜೋಶಿ ಮತ್ತು ರವಿಚಂದ್ರ ಮೂಡುಕೊಣಾಜೆ ಉಪಸ್ಥಿತರಿದ್ದರು.