ಕುಂದಾಪ್ರ ಡಾಟ್ ಕಾಂ ವರದಿ
ಉಡುಪಿ: ಉಡುಪಿ ಜಿಲ್ಲೆ ಕನ್ನಡ ನಾಡು ನುಡಿಯ ಸಂಭ್ರಮದ ಹಬ್ಬಕ್ಕೆ ಸಜ್ಜಾಗುತ್ತಿದೆ. ಕನ್ನಡದ ಕಂಪು ಇಡೀ ಜಿಲ್ಲೆ ಪಸರಿಸಲು ವೇದಿಕೆ ತಯಾರಾಗಿದೆ. ಸಾಹಿತ್ಯ ಲೋಕದ ದಿಗ್ಗಜರ ಅಪೂರ್ವ ಸಂಗಮಕ್ಕೆ ನಾಂದಿಯಾಗಲು 14 ನೇ ಕನ್ನಡ ಸಾಹಿತ್ಯ ಸಮ್ಮೇಳನ ತಯಾರಾಗಿದೆ. ಕನ್ನಡದ ತೇರು ಎಳೆಯಲು ಕನ್ನಡಾಭಿಮಾನಿಗಳು ಉತ್ಸುಕರಾಗಿದ್ದಾರೆ.
ಹೌದು ಕನ್ನಡ-ನಾಡು ನುಡಿಯನ್ನು ಬಿಂಬಿಸುವ, ಕನ್ನಡ ಸಾಹಿತ್ಯ ಲೋಕದ ಮಜಲುಗಳನ್ನು ಬಿಂಬಿಸುವ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಇರುವಂತಿಗೆ-2020(ಹೊಸ ದಿಸೆಯ ಬೆಳಕು) ಹೆಸರಿನೊಂದಿಗೆ ಮಾರ್ಚ್ 14 ಹಾಗೂ 15 ರಂದು ಚೇತನ ಫ್ರೌಡಶಾಲೆ ಹಂಗಾರಕಟ್ಟೆಯಲ್ಲಿ ಸಂಭ್ರಮದ ವಾತವರಣ. ಇಲ್ಲಿ ಹಾಡು -ನೃತ್ಯ-ಕವಿಗೋಷ್ಠಿ-ಸಂವಾದ-ಸಾಧಕರನ್ನು ಗುರುತಿಸುವುದು ಇನ್ನೂ ಹತ್ತು ಹಲವಾರು ಕಾರ್ಯಕ್ರಮ ಒಂದೇ ವೇದಿಕೆಯಲ್ಲಿ ಇದೆ.
ಸಮ್ಮೇಳನದ ಅಧ್ಯಕ್ಷೆ ವೈದೇಹಿ:
ಕನ್ನಡ ಸಾಹಿಯ ಲೋಕಕ್ಕೆ ಕರಾವಳಿಗರ ಪಾಲು ತುಂಬಾನೇ ಇದೆ. ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಕಾರಂತಜ್ಜ ನಮ್ಮ ಕರಾವಳಿಯವರು ಎಂಬುವುದು ನಮ್ಮ ಹೆಮ್ಮೆ. ಹಾಗೆಯೇ ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಗಣನೀಯ ಸೇವೆ ನೀಡಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ವೈದೇಹಿ ಅವರು ಈ ಸಲದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಇವರು 12-02-1945 ರಂದು ಕುಂದಾಪುರದಲ್ಲಿ
ಜನಿಸಿದರು. ಇವರ ತಂದೆ ಎ.ವಿ.ಎನ್ ಹೆಬ್ಬಾರ್ ತಾಯಿ ಮಹಾಲಕ್ಷ್ಮೀ. ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನಲಿ ಬಿ.ಕಾಂ ಪದವಿ ಪಡೆದಿದ್ದಾರೆ.
ವೈದೇಹಿ ಎಂಬ ಕಾವ್ಯ ನಾಮದಿಂದ ಪ್ರಸಿದ್ಧಿಯಾಗಿರುವ ಇವರ ಮೂಲ ನಾಮ ’ಜಾನಕಿ ಶ್ರೀನಿವಾಸಮೂರ್ತಿ’. ಕನ್ನಡದ ಪ್ರಸಿದ್ಧ ಮಹಿಳಾ ಲೇಖಕಿಯಾಗಿ ಗುರುತಿಸಿಕೊಂಡಿರುವ ಇವರು ಸಣ್ಣಕಥೆ, ಕಾವ್ಯ, ಕಾದಂಬರಿಗಳು, ಮಕ್ಕಳ ಸಾಹಿತ್ಯ ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಇವರ ಗುಲಾಬಿ ಟಾಕೀಸ್ ಕಾದಂಬರಿ ಚಲನಚಿತ್ರವಾಗಿ ಉಮಾಶ್ರೀ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ತಂದುಕೊಟ್ಟಿದೆ ಅಲ್ಲದೇ ಇತ್ತೀಚಿಗೆ ಇವರ ಕಾದಂಬರಿ ಆಧಾರಿತ ’ಅಮ್ಮಚ್ಚಿಯೆಂಬ ನೆನಪು’ ಸಿನಿಮಾವಾಗಿ ಜನಮನಗೆದ್ದಿದೆ. ಇವರ ಹಲವಾರು ಸಣ್ಣ ಕಥೆಗಳು ಹಿಂದಿ, ಮಲೆಯಾಳಂ, ತಮಿಳು, ತೆಲುಗು, ಗುಜರಾತಿ ಭಾಷೆಗೆ ಅನುವಾದಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಜೊತೆಗೆ ಹಲವಾರು ಪ್ರಮುಖ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ.
ಎರಡು ದಿನಗಳ ಕಾಲ ನಾಡು-ನುಡಿ ಜಾತ್ರೆ-ಕನ್ನಡ ತೇರು:
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಸಾರಥ್ಯದಲ್ಲಿ ಉಸಿರು ಕೋಟ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಉಡುಪಿ ಜಿಲ್ಲೆ ಸಹಕಾರದಲ್ಲಿ ಮಾರ್ಚ್ 14, 15 ರಂದು ವಿವಿಧ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಅಲ್ಲದೇ ಗೋಷ್ಠಿ-ಸಂವಾದಗಳನ್ನು ಏರ್ಪಾಡು ಮಾಡಲಾಗಿದೆ. ಮಾರ್ಚ್ 15 ರಂದು ಬೆಳಿಗ್ಗೆ 8.30 ಕ್ಕೆ ಧ್ವಜಾರೋಹಣ, 9.30ಕ್ಕೆ ಅಧ್ಯಕ್ಷರನ್ನು ಎದುರುಗೊಳ್ಳುವುದು, 10.00ಕ್ಕೆ ಸಮ್ಮೇಳನದ ಉದ್ಘಾಟನೆ, 12.00 ಗಂಟೆಗೆ ಮರೆಯಲಾಗದ ಮಹನೀಯರು, ಅಪರಾಹ್ನ 1.00 ಗಂಟೆಗೆ ಚೇತನಾ ಫ್ರೌಡಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, 2.30ಕ್ಕೆ ಕವಿಗೋಷ್ಠಿ, 4.15 ಕ್ಕೆ ಯಕ್ಷಗಾನ ಸ್ಥಿತ್ಯಂತರ-ಗೋಷ್ಠಿ, 5.15 ಕ್ಕೆ ನೃತ್ಯ ವೈಭವ, 5.30ಕ್ಕೆ ನನ್ನ ಕಥೆ :ನಿಮ್ಮ ಜೊತೆ, ಸಂಜೆ 6 ಕ್ಕೆ ಸಂಗೀತ ಮಹಾಸಮರ ಹಾಡೊಮ್ಮೆ ಹಾಡಬೇಕು.(ಮಧುರ ಕನ್ನಡ ಗೀತೆಗಳ ಮಧುರಯಾನ).
ಮಾರ್ಚ್ 15ರ ಭಾನುವಾರ ಬೆಳಿಗ್ಗೆ 9.00 ಕ್ಕೆ ಉದಯರಾಗ, ವೀಣಾವಾದನ, 9.30ಕ್ಕೆ ಪುಟಾಣಿ ಪಂಟರು, 10.00 ಕ್ಕೆ ವಿದ್ಯಾರ್ಥಿಗೋಷ್ಠಿ, 11.00ಕ್ಕೆ ಮಹಿಳಾ ಗೋಷ್ಠಿ , 12.00ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಒಂದಿಷ್ಟು ಹೊತ್ತು, ಅಪರಾಹ್ನ 1.00ಕ್ಕೆ ಬಿ.ಡಿ.ಶೆಟ್ಟಿ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ , 2.00ಕ್ಕೆ ನಮ್ಮ ಉಡುಪಿ, 3.00ಕ್ಕೆ ಬಹಿರಂಗ ಅಧಿವೇಶನ, 4.00ಕ್ಕೆ ನನ್ನ ಭಾಷೆ-ನನ್ನ ಹೆಮ್ಮೆ-ಸಂವಾದ, 4.30ಕ್ಕೆ ಸಮಾರೋಪ-ಸಂಮಾನ, 6.00ಕ್ಕೆ ಯಕ್ಷಗಾನ ನಾಟ್ಯ ರಸಾಯನ, ಸಂಜೆ 6.30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಪ್ರಸ್ತುತಿ ಜನಪದ ಸಂಗಮ ದಯ್ಯರೇ ದಯ್ಯ… ಕಾರ್ಯಕ್ರಮ ನಡೆಯಲಿದೆ.