Kundapra.com ಕುಂದಾಪ್ರ ಡಾಟ್ ಕಾಂ

ಚಿಕಿತ್ಸೆ ನಿರಾಕರಿಸಿ ಪರಾರಿಯಾಗಿದ್ದ ಕರೋನಾ ಶಂಕಿತ ಪತ್ತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಮಾ.19: ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನದ ಹೊತ್ತಿಗೆ ಚಿಕಿತ್ಸೆಗಾಗಿ ತೆರಳಿದ್ದ ಕರೋನಾ ಶಂಕಿತ ವ್ಯಕ್ತಿಯೋರ್ವ ಐಸೋಲೆಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನಿರಾಕರಿಸಿ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದು, ಪೊಲೀಸರ ನೆರವಿನಿಂದ ಆತನನ್ನು ಮರಳಿ ಕರೆತಂದು ಚಿಕಿತ್ಸೆ ಒಳಪಡಿಸಿದ ಘಟನೆ ನಡೆದಿದೆ. ಕರೋನಾ ಶಂಕಿತ ವ್ಯಕ್ತಿ ವಿದೇಶದಿಂದ ಮರಳಿದ್ದು, ಜ್ವರ ಹಾಗೂ ತಲೆನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ.

ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ವ್ಯಕ್ತಿಯನ್ನು ಐಸೋಲೇಷನ್ ವಾರ್ಡ್‌ಗೆ ತೆರಳಲು ವೈದ್ಯರು ಸೂಚಿಸಿದಾಗ ಅದನ್ನು ನಿರಾಕರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಬಗ್ಗೆ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪರಾರಿಯಾಗಿದ್ದ ವ್ಯಕ್ತಿಯನ್ನು ಮರಳಿ ಆಸ್ಪತ್ರೆಗೆ ಕರೆತಂದು ಆತನಿಗೆ ಕಡ್ಡಾಯ ಹೋಂ ಕ್ವಾರಟೈನ್ ವಿಧಿಸಲಾಗಿದೆ. ಕುಂದಾಪ್ರ ಡಾಟ್ ಕಾಂ.

ಇಬ್ಬರಿಗೆ ಮನೆಯಲ್ಲಿಯೇ ನಿಗಾ, ಓರ್ವನಿಗೆ ಚಿಕಿತ್ಸೆ:
ಕರೋನಾ ಶಂಕಿತ ಬೈಂದೂರು ತಾಲೂಕಿನ ಶಿರೂರು ಹಾಗೂ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಇಬ್ಬರ ಮನೆಯಲ್ಲಿ ನಿಗಾದಲ್ಲಿದ್ದು, ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದ ಮತ್ತೊಬ್ಬರು ಗುರುವಾರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಐಸೋಲೆಷನ್ ವಾರ್ಡಿಗೆ ದಾಖಲಾಗಿದ್ದಾರೆ.

ಬುಧವಾರವೂ ಜಡ್ಕಲ್ ಗ್ರಾಮ ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಕರೋನ ಶಂಕೆ ಹಿನ್ನೆಲೆಯಲ್ಲಿ ಮತ್ತೊಬ್ಬರು ದಾಖಲಾದಂತಾಗಿದೆ. ದಾಖಲಾದ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯ ಬಳಿಕ ಸೂಕ್ತ ಚಿಕಿತ್ಸೆ ನೀಡುವ ನಿರ್ಣಯಕ್ಕೆ ಬರಲಾಗುತ್ತದೆ. ಕುಂದಾಪ್ರ ಡಾಟ್ ಕಾಂ.

Exit mobile version