Kundapra.com ಕುಂದಾಪ್ರ ಡಾಟ್ ಕಾಂ

ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ: ನಷ್ಟದಲ್ಲಿ ಉದ್ದಿಮೆದಾರರು

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಚಂಡಮಾರುತ ಹಾಗೂ ಕೊರೊನಾ ಭೀತಿಯಿಂದ ಪ್ರವಾಸೋದ್ಯಮಕ್ಕೆ ಬಲವಾದ ಹೊಡೆತ ಬಿದ್ದಿದ್ದು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿದ್ದ ಹೂಡಿಕೆದಾರರು ಕಂಗಾಲಾಗಿದ್ದಾರೆ.

ಈ ಸಾಲಿನಲ್ಲಿ ಸತತ ನಾಲ್ಕು ಚಂಡಮಾರುತಗಳು ಕರಾವಳಿ ತೀರ ಪ್ರದೇಶಕ್ಕೆ ಅಪ್ಪಳಿಸುವ ಭೀತಿ ಎದುರಾಗಿತ್ತು. ಚಂಡಮಾರುತದ ಭೀತಿ ದೂರವಾಗಿ ಪ್ರವಾಸೋದ್ಯಮ ಚೇತರಿಸಿಕೊಳ್ಳುವಷ್ಟರಲ್ಲಿ ಇದೀಗ ಕೊರೊನಾ ಭೀತಿ ಎದುರಿಸುವಂತಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ ಪ್ರವಾಸೋದ್ಯಮ ಕ್ಷೇತ್ರ ಬಹಳಷ್ಟು ನಷ್ಟ ಅನುಭವಿಸಿದೆ. ಕರಾವಳಿ ತೀರ ಪ್ರದೇಶಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕೂಡ ಗಣನೀಯವಾಗಿ ಇಳಿಮುಖವಾಗಿದ್ದು, ಪ್ರವಾಸಿಗರನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಅದೆಷ್ಟೋ ಉದ್ದಿಮೆ, ವ್ಯವಹಾರಗಳು ನಷ್ಟದಲ್ಲಿದೆ.

ಸರಕಾರದ ಯಾವುದೇ ಸಹಾಯಧನ, ಸಬ್ಸಿಡಿ ಇಲ್ಲದೆ ಪ್ರವಾಸೋದ್ಯಮದ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿದ್ದ ಹೂಡಿಕೆದಾರರು ದಿಕ್ಕು ತೋಚದಂತಾಗಿದ್ದಾರೆ. ಪಕ್ಕದ ಕೇರಳ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಸಾಂಪ್ರದಾಯಿಕ ದೋಣಿ ಮನೆ ನಡೆಸುವವರಿಗೆ ಉಚಿತ ವಿದ್ಯುತ್, ನೀರು ಹಾಗೂ ಸಬ್ಸಿಡಿ ದರದಲ್ಲಿ ಡೀಸೆಲ್ ನೀಡುತ್ತಿದೆ. ಅಲ್ಲದೆ ಕೆಲವೊಂದು ವೃತ್ತಿಗೆ ಸಬ್ಸಿಡಿಯನ್ನು ನೀಡುವ ಮೂಲಕ ಹೂಡಿಕೆದಾರರಿಗೆ ಬೆಂಬಲ ನೀಡುತ್ತಿದೆ.

ಆದರೆ ನಮ್ಮ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿದ್ದರೂ ಪ್ರವಾಸೋದ್ಯಮ ಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಅನೇಕ ಪ್ರವಾಸಿ ತಾಣಗಳು, ಪ್ರಸಿದ್ಧ ದೇವಾಲಯಗಳು, ಪಂಚ ನದಿಗಳ ಸಂಗಮ ತಾಣ, ಮೀನುಗಾರಿಕಾ ಬಂದರು, ತ್ರಾಸಿ-ಮರವಂತೆ ಕಡಲ ತೀರ, ಕೋಡಿ ಕಡಲ ತೀರ, ಸೋಮೇಶ್ವರ ಕಡಲ ತೀರ ಸೇರಿದಂತೆ ಅನೇಕ ಸುಂದರ ತಾಣಗಳಿದ್ದರೂ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗುತ್ತಿದೆ. ಇತ್ತೀಚಿಗಷ್ಟೇ ಪ್ರವಾಸಿಗರಿಗೆ ಪರಿಚಯಿಸಲ್ಪಟ್ಟಿರುವ ಸಾಂಪ್ರದಾಯಿಕ ದೋಣಿ ಮನೆಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ಭಾಗಕ್ಕೆ ಬಾರದಿರುವುದು, ಬಂದರೂ ಇಂತಹ ನೂತನ ವ್ಯವಸ್ಥೆಗಳತ್ತ ಮುಖ ಮಾಡದಿರುವುದರಿಂದ ಅದು ನಷ್ಟದ ಹಾದಿ ಹಿಡಿಯುತ್ತಿದೆ. ಹೀಗಾಗಿ ಕೋಟ್ಯಾಂತರ ರೂ. ಹೂಡಿಕೆ ಮಾಡಿರುವವರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.

ರಾಜ್ಯದ ಕರಾವಳಿ ಭಾಗದಲ್ಲಿ ನಷ್ಟದಲ್ಲಿರುವ ಪ್ರವಾಸೋದ್ಯಮದ ಉದ್ದಿಮೆ, ವ್ಯವಹಾರಗಳಿಗೆ ಸರಕಾರದ ನೆರವು ಬೇಕಾಗಿದೆ. ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಬೆಳೆಸಲು ಇತರ ರಾಜ್ಯಗಳಲ್ಲಿ ಇರುವಂತೆ ಸಹಾಯಧನ, ಸಬ್ಸಿಡಿ ನೀಡಲು ಕ್ರಮಕೈಗೊಳ್ಳಬೇಕಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇರುವ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಬೆಳೆಸಲು ಸರಕಾರ ಸೂಕ್ತ ಯೋಜನೆ ರೂಪಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

* ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಹಳಷ್ಟು ನಷ್ಟ ಅನುಭವಿಸಿದ್ದೇವೆ. ಚಂಡಮಾರುತ ಹಾಗೂ ಕೊರೊನಾ ಭೀತಿಯಿಂದ ಕುಂದಾಪುರ ತಾಲೂಕಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಗುಜ್ಜಾಡಿ ಗ್ರಾಮದ ಮಂಕಿ ಎಂಬಲ್ಲಿ ಪ್ರಾರಂಭಿಸಲಾಗಿರುವ ಸಾಂಪ್ರದಾಯಿಕ ದೋಣಿ ಮನೆ (ಕ್ರೂಸ್) ನಷ್ಟದತ್ತ ಮುಖ ಮಾಡಿದೆ. ಸರಕಾರದ ಯಾವುದೇ ಸಹಾಯಧನ, ಸಬ್ಸಿಡಿ ಇಲ್ಲದೆ ನಡೆಯುತ್ತಿರುವ ಸಾಂಪ್ರದಾಯಿಕ ದೋಣಿ ಮನೆಗೆ ಸರಕಾರದ ನೆರವು ಬೇಕಾಗಿದೆ – ಟಿ.ವಾಸುದೇವ ದೇವಾಡಿಗ, ಸಾಂಪ್ರದಾಯಿಕ ದೋಣಿ ಮನೆ (ಕ್ರೂಸ್) ಪಾಲುದಾರ, ಗಂಗೊಳ್ಳಿ.

Exit mobile version