Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದ ಉದ್ಯಮಿ ಕೊಲೆ ಯತ್ನ: ನಾಲ್ವರು ಆರೋಪಿಗಳ ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪಾಲುದಾರಿಕೆಯಲ್ಲಿ ಮೀನು ಮಾರಾಟ ವ್ಯವಹಾರ ನಡೆಸುತ್ತಿದ್ದ ಉದ್ಯಮಿಯೋರ್ವರ ಕೊಲೆಗೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಕುಂದಾಪುರ ಪೊಲೀಸರ ತಂಡ ತ್ವರಿತ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಆರೋಪಿಗಳಿಂದ ಮಾರಕಾಯುಧ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಮಹಾರಾಷ್ಟ್ರ ರತ್ನಗಿರಿ ಮೂಲದ ದಾನೀಶ್ ಪಾಟೀಲ್ (34) ಹಾಗೂ ಆತನ ಸಹಚರರಾದ ಆಸೀಮ್ ಖಾಜಿ (39, ಮುಕದ್ದರ್ ಜಮಾದರ್ (34), ಪ್ರಸಾದ್ (47) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
ಹಂಗಳೂರಿನ ಫ್ಲ್ಯಾಟ್ ಒಂದರಲ್ಲಿ ವಾಸವಿರುವ ಮರವಂತೆಯ ಮೊಹಮ್ಮದ್ ಶಾಕೀರ್ ಎಂಬುವವರು ಸುಮಾರು ಎರಡು ವರ್ಷಗಳಿಂದ ಮಹಾರಾಷ್ಟ್ರ ರತ್ನಗಿರಿಯ ದಾನೀಶ್ ಪಾಟೀಲ್ ಎಂಬುವವರೊಂದಿಗೆ ಮೀನು ಖರೀದಿ ವ್ಯವಹಾರ ನಡೆಸುತ್ತಿದ್ದರು. ಹಣದ ಲೆಕ್ಕಾಚಾರ ಸರಿಯಾಗಿದ್ದಾಗ್ಯೂ ದಾನೀಶ್ ಪಾಟೀಲ್ ಎಂಬಾತ, ಶಾಕೀರ್ ಹಾಗೂ ಅವರ ತಂದೆಗೆ ಆಗಾಗ್ಗೆ ಕರೆ ಮಾಡಿ ನೀವು 50ಲಕ್ಷ ರೂ. ಕೊಡುವುದು ಬಾಕಿ ಇದೆ. ಅದನ್ನು ಕೊಡುವಂತೆ ಬೆದರಿಕೆ ಹಾಕುತ್ತಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ರತ್ನಗಿರಿಯಿಂದ ಕುಂದಾಪುರಕ್ಕೆ ಬಂದು ಲಾಡ್ಜ್ ಒಂದರಲ್ಲಿ ವಾಸವಿದ್ದ ಆರೋಪಿಗಳು ಮಾಚ್.20ರ ಬೆಳಿಗ್ಗೆ ಶಾಕೀರ್ ವಾಸವಿದ್ದ ಪ್ಲಾಟ್ ಬಳಿ ಬಂದು ಬೆದರಿಕೆ ಹಾಕಿದ್ದರು. ಬಳಿಕ ಮತ್ತೆ ಕರೆಮಾಡಿದ ದಾನೀಶ್ ತಾನು ವಾಸವಿದ್ದ ಲಾಜ್ಡ್‌ಗೆ ಬಂದರೆ ಬಾಕಿ ಇರುವ ಹಣದ ಲೆಕ್ಕಾಚಾರ ತಿಳಿಸುವುದಾಗಿ ಹೇಳಿದ್ದರು. ಅಂದು ಸಂಜೆಯ ವೇಳೆಗೆ ಶಾಕೀರ್ ಹಾಗೂ ಅವರ ಸ್ನೇಹಿತ ಸುಹೈಲ್ ಕಾರಿನಲ್ಲಿ ತೆರಳುತ್ತಿದ್ದಾಗ ಅವರನ್ನು ಅಡ್ಡಗಟ್ಟಿದ ಆರೋಪಿಗಳು ಶಾಕೀರ್ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಬೀಸಿ, ಹಣಕ್ಕಾಗಿ ಬೆದರಿಕೆ ಹಾಕಿದ್ದರು. ಆದರೆ ಶಾಕೀರ್ ಅಲ್ಲಿಂದ ತಪ್ಪಿಸಿಕೊಂಡು ಬಂದು ಮನೆಯವರಿಗೆ ವಿಷಯ ತಿಳಿಸಿ, ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕುಂದಾಪುರ ಪೊಲೀಸರಿಂದ ತ್ವರಿತ ಕಾರ್ಯಾಚರಣೆ:
ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಕುಂದಾಪುರದ ಪಿಎಸೈ ಹರೀಶ್ ಆರ್. ಮತ್ತವರ ತಂಡ ಆರೋಪಿಗಳಿಗಾಗಿ ಕಾರ್ಯಾಚರಣೆಗಿಳಿಯಿತು. ಅಷ್ಟರಲ್ಲಾಗಲೇ ಆರೋಪಿಗಳು ವಾಸವಿದ್ದ ಲಾಡ್ಜ್‌ನಿಂದ ಕಾಲ್ಕಿತ್ತಿದ್ದರು. ಪೊಲೀಸರು ತಕ್ಷಣ ಅವರ ಕಾರನ್ನು ಬೆನ್ನತ್ತಿದ್ದು, ಕೊಟೇಶ್ವರದ ಸಮೀಪ ಆರೋಪಿಗಳನ್ನು ಬಂಧಿಸಿದರು. ಬಂಧಿತ ಆರೋಪಿಗಳಿಂದ ಕಾರು, ಚೂರಿಗಳು ಹಾಗೂ ಸ್ಕ್ರೂಡ್ರೈವರ್ ವಶಕ್ಕೆ ಪಡೆದುಕೊಳ್ಳಲಾಗಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ./

 

Exit mobile version