Kundapra.com ಕುಂದಾಪ್ರ ಡಾಟ್ ಕಾಂ

ಜನತಾ ಕರ್ಪ್ಯೂಗೆ ಕುಂದಾಪುರ, ಬೈಂದೂರು ತಾಲೂಕು ಸಂಪೂರ್ಣ ಸ್ತಬ್ಧ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ/ಬೈಂದೂರು: ಕರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಪ್ಯೂಗೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಉಭಯ ತಾಲೂಕುಗಳಲ್ಲಿ ಜನಜೀವನ ಸಂಪೂರ್ಣ ಸ್ಥಭ್ತವಾಗಿತ್ತು. ಜನರು ಮನೆಯಲ್ಲಿಯೇ ಉಳಿದು ಸ್ವಯಂಪ್ರೇರಣೆಯಿಂದ ತಮ್ಮ ಬೆಂಬಲ ಸೂಚಿಸಿದರು.

ಬಿಕೋ ಎನ್ನುತ್ತಿದ್ದ ಅಂಗಡಿ ಮುಂಗಟ್ಟು, ಬಸ್ ನಿಲ್ದಾಣ:
ಸದಾ ಜನರಿಂದ ಗಿಜುಗುಡುತ್ತಿದ್ದ ಕುಂದಾಪುರ ನಗರದ ಅಂಗಡಿ ಮುಂಗಟ್ಟುಗಳು, ಬಸ್ ನಿಲ್ದಾಣಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ರಾಷ್ಟ್ರೀಯ ಹೆದ್ದಾರಿ- 66 ಸೇರಿದಂತೆ ಉಳಿದೆಲ್ಲಾ ರಸ್ತೆಗಳಲ್ಲಿಯೂ ವಾಹನ ಸಂಚಾರ ಅತಿ ವಿರಳವಾಗಿತ್ತು. ಸರಕಾರಿ ವಾಹನಗಳು, ಅಂಬುಲೆನ್ಸ್, ಅಲ್ಲೊಂದು ಇಲ್ಲೊಂದು ಎಂಬಂತೆ ಖಾಸಗಿ ವಾಹನಗಳು ಮಾತ್ರವೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವುದು ಕಂಡುಬಂತು. ಬೈಂದೂರು ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಕುಂದಾಪ್ರ ಡಾಟ್ ಕಾಂ ವರದಿ.

ಮುಚ್ಚಿದ ಚರ್ಚು, ದೇವಾಲಯ, ಮಸೀದಿ:
ಕರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸರಕಾರದ ಆದೇಶವನ್ನು ಪಾಲಿಸುತ್ತಿರುವ ಶ್ರದ್ಧಾಕೇಂದ್ರಗಳು, ಭಾನುವಾರವೂ ಸಂಪೂರ್ಣ ಮುಚ್ಚಿದ್ದವು. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಯಾವುದೇ ಚರ್ಚ್‌ಗಳಲ್ಲಿ ಸಾಮೂಹಿಕ ಪಾರ್ಥನೆ ಜರುಗಲಿಲ್ಲ. ದೇವಾಲಯ ಮುಚ್ಚಿದ್ದವು, ಮಸೀದಿಗಳಿಗೂ ಜನರು ತೆರಳುವುದು ಕಂಡುಬರಲಿಲ್ಲ. ಕುಂದಾಪ್ರ ಡಾಟ್ ಕಾಂ ವರದಿ.

ಬಸ್ ಇಲ್ಲ, ಆಟೋ, ಕ್ಯಾಬ್ ಸಂಪೂರ್ಣ ಸ್ಥಗಿತ:
ಭಾನುವಾರ ಪೂರ್ವನಿರ್ಧಾರದಂತೆ ಯಾವೊಂದು ಖಾಸಗಿ ಬಸ್‌ಗಳು ಬೀದಿಗಿಳಿಯಲ್ಲ. ಕುಂದಾಪುರದ ಹೊಸ ಬಸ್ ನಿಲ್ದಾಣ, ಶಾಸ್ತ್ರೀ ಸರ್ಕಲ್ ಬಸ್ ನಿಲ್ದಾಣ, ಕುಂದಾಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ತ್ರಾಸಿ ಬಸ್ ನಿಲ್ದಾಣ, ಕೊಲ್ಲೂರು, ಸಿದ್ಧಾಪುರ, ಬೈಂದೂರು ಬಸ್ ನಿಲ್ದಾಣ ಸೇರಿದಂತೆ ಎಲ್ಲಾ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಎಲ್ಲಿಯೂ ಆಟೋ ಸಂಚಾರ ಕೂಡ ಕಂಡುಬರಲಿಲ್ಲ. ಕುಂದಾಪುರ ಡಿಪೋದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಜನರು ಬೀಚ್‌ಗಳಿಗೆ ತೆರಳುವುದನ್ನು ನಿರ್ಭಂದಿಸಲಾಗಿತ್ತು. ಕುಂದಾಪ್ರ ಡಾಟ್ ಕಾಂ ವರದಿ.

ಮೀನು, ಕೋಳಿಯೂ ಇಲ್ಲ:
ಕರ್ಪ್ಯೂ ಹಿನ್ನೆಲೆಯಲ್ಲಿ ಭಾನುವಾರವಾದರೂ ಮೀನು ಮಾರುಕಟ್ಟೆಗಳು ಬಂದ್ ಆಗಿದ್ದವು. ಅಲ್ಲಲ್ಲಿ ಇರುವ ಮೀನು ಮಾರಾಟದ ಅಂಗಡಿ, ಕೋಳಿ ಅಂಗಡಿಗಳು ಮುಚ್ಚಿದ್ದವು. ಇನ್ನು ದೋಣಿಗಳು ಬಂದರಿನಲ್ಲಿಯೇ ಲಂಗರು ಹಾಕಿರುವುದು ಕಂಡುಬಂತು. ಕುಂದಾಪ್ರ ಡಾಟ್ ಕಾಂ ವರದಿ.

ಸ್ವಯಂಪ್ರೇರಿತ ಕರ್ಪ್ಯೂಗೆ ಜನರ ಸಂಪೂರ್ಣ ಬೆಂಬಲ, ಮುಚ್ಚಿದ ಅಂಗಡಿ ಮುಂಗಟ್ಟು:
ದೇಶದಲ್ಲಿ ಹರಡುತ್ತಿರುವ ಕರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ಕರೆ ನೀಡಿದ ಕರ್ಪ್ಯೂಗೆ ಪಕ್ಷ, ಸಿದ್ಧಾಂತಗಳ ಭೇದ ಮರೆತು ಉಭಯ ತಾಲೂಕು ಬಹುಪಾಲು ಜನರು ಬೆಂಬಲ ಸೂಚಿಸಿದ್ದರು. ಬೆಳಿಗ್ಗೆಯಿಂದಲೇ ಸ್ವಯಂಪ್ರೇರಿತವಾಗಿ ಮನೆಯಲ್ಲಿಯೇ ಉಳಿದು ಮಹಾಮಾರಿಯ ವಿರುದ್ಧ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿರ್ಧಾರ ಕೈಗೊಂಡಿದ್ದರು. ಹೋಟೆಲ್, ಬೇಕರಿ, ಸೆಲೂನ್, ಬ್ಯೂಟಿಪಾರ್ಲರ್, ಕ್ಲಿನಿಕ್, ರೆಸ್ಟೊರೆಂಟ್ ಸೇರಿದಂತೆ ಎಲ್ಲಾ ಬಗೆಯ ಅಂಗಡಿಗಳು ಮುಚ್ಚಿದ್ದವು. ಕೆಲವು ಮೆಡಿಕಲ್ ಶಾಪ್‌ಗಳು, ನಗರದ ಕೆಲವು ಪೆಟ್ರೋಲ್ ಬಂಕ್‌ಗಳು ಮಾತ್ರ ಲಭ್ಯವಿದ್ದವು. ಪೌರಕಾರ್ಮಿಕರು ಬೆಳಿಗ್ಗೆ ತಮ್ಮ ದೈನಂದಿನ ಕೆಲಸದಲ್ಲಿ ನಿರತರಾಗಿದ್ದುದು ಕಂಡುಬಂತು.

ಶಿರೂರು ಗಡಿಭಾಗದಲ್ಲಿ ಆರೋಗ್ಯ ತಪಾಸಣೆ:
ಇಂದು ಬೆಳಿಗ್ಗೆ ಮುಂಬೈನಿಂದ ಹೊರಟ್ಟಿದ್ದ ಬಸ್ಸುಗಳು ಉಡುಪಿ ಕಡೆಗೆ ತೆರಳುತ್ತಿದ್ದರಿಂದ ಶಿರೂರು ಗಡಿಭಾಗದಲ್ಲಿ ಬಸ್ಸಿನಲ್ಲಿ ಆಗಮಿಸುತ್ತಿರವವರ ಆರೋಗ್ಯ ತಪಾಸಣೆಗೆ ಮಾಡಲಾಯಿತು. ಮುಂಬೈನಿಂದ ಆಗಮಿಸುವ ಎಲ್ಲಾ ಬಸ್‌ಗಳನ್ನು ತಡೆಗೆ ಅದರಲ್ಲಿರುವವರ ಆರೋಗ್ಯ ತಪಾಸಣೆ ಮಾಡಲಾಯಿತು./ಕುಂದಾಪ್ರ ಡಾಟ್ ಕಾಂ ವರದಿ./

Exit mobile version