Kundapra.com ಕುಂದಾಪ್ರ ಡಾಟ್ ಕಾಂ

ಹಸುಳೆಯ ಮೇಲೆ ಟಿಪ್ಪರ್ ಹರಿದು ದಾರುಣ ಸಾವು

ಕುಂದಾಪುರ: ನಗರದ ಶೆಣೈ ವೃತ್ತದ ಬಳಿ (ಈ ಹಿಂದೆ ವೃಂದಾವನ ಹೋಟೇಲಿದ್ದ ಜಾಗದಲ್ಲಿ) ನಡೆಯುತ್ತಿರುವ ಕಾಮಗಾರಿಯ ಪ್ರದೇಶದಲ್ಲಿ ಸಂಜೆಯ ವೇಳೆಗೆ ಟಿಪ್ಪರ್ ಚಕ್ರಕ್ಕೆ ಸಿಲುಕಿದ ಎಳೆಯ ಹಸುಳೆಯೊಂದು ಸ್ಥಳದಲ್ಲೇ ಅನುನೀಗಿದ ಘಟನೆ ನಡೆದಿದೆ. ತಾಮಣ್ಣ (ಒಂದೂವರೆ ವರ್ಷ) ಮೃತ ದುರ್ದೈವಿ ಕೂಸು.

ಮೂಲತ: ಕೊಪ್ಪಳದ ಉದಯನಗರದವರಾದ ಲಕ್ಷ್ಮೀ ಮಾರುತಿ ದಂಪತಿಗಳ ಕೊನೆಯ ಮಗುವೇ ದುರಂತ ಅಂತ್ಯಕ್ಕೀಡಾದ ತಾಮಣ್ಣ. ಕಟ್ಟಡ ಕಾಮಗಾರಿಯ ಸಂಬಂಧ ಆಗಮಿಸಿದ ಟಿಪ್ಪರ್‌ವೊಂದು ಪುನಃ ವಾಪಾಸು ಹೊರಟಾಗ ಎದುರಿಗೆ ಹಂಪ್ಸ್ ಇದ್ದ ಕಾರಣ ಚಾಲಕ ಹಿಮ್ಮುಖವಾಗಿ ಚಲಿಸಿದ್ದೆ ವಿದ್ರಾವಕ ಅಂತ್ಯಕೊಂದು ಮುನ್ನುಡಿಯಾಯಿತು. ಅಷ್ಟರ ತನಕ ಅಲ್ಲಿಯೇ ಕೆಲಸಮಾಡುತ್ತಿದ್ದ ತಾಯಿಯ ಬಳಿಯಿದ್ದ ಮಗು ಮುಂದಕ್ಕೆ ಓಡಿ ಬರುವುದಕ್ಕೂ ಟಿಪ್ಪರ್ ಹಿಂದೆ ಚಲಿಸುವದಕ್ಕೂ ತಾಳೆಯಾಗಿ ಟಿಪ್ಪರ್ ನ ಹಿಂದಿನ ಚಕ್ರವೊಂದು ಉರುಳಿದ ಮಗುವಿನ ತಲೆಯ ಮೇಲೆ ಹರಿದು ಬಿಟ್ಟ ರಭಸಕ್ಕೆ ಪುಟ್ಟ ಅಕ್ರಂದನಕ್ಕೂ ಅವಕಾಶವಿಲ್ಲದಂತೆ ನಿರ್ದಯಿ ಸಾವು ನಿಷ್ಪಾಪಿ ಹಸುಳೆಯನ್ನು ಹೊಸಕಿ ಹಾಕಿತ್ತು. ಈ ಬೀಭತ್ಸ ಘಟನೆ ಹೆತ್ತೊಡಲ ಎದುರಿಗೇ ಜರಗಿದ್ದು “ಅಯ್ಯೋ ಕಂದಾ ಎಂದು ಚೀರುತ್ತಲೇ ಬಂದ ತಾಯಿ ಲಕ್ಷ್ಮಿ ನೆಲಕ್ಕೆ ಅಂಟಿ ಕೂತಂತಿದ್ದ ಛಿದ್ರ ವಾಗಿದ್ದ ಮಗುವಿನ ತಲೆಯ ಚಿಪ್ಪಿನ ಸಮೇತ ಮಗುವನ್ನು ಎತ್ತಿಕೊಂಡು ಅಲ್ಲೇ ಎದುರಿಗಿರುವ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ ದೃಶ್ಯ ಎಂತಹ ಕಲ್ಲು ಹೃದಯವನ್ನಾದರೂ ಕರಗಿಸುವಂತಿತ್ತು.

ದೂರದ ಊರಿನಿಂದ ಹೊಟ್ಟೆಯ ಸಂಕಟವನ್ನು ಕಟ್ಟಿ ಕೊಳ್ಳಲು, ಪುಟ್ಟ ಮಕ್ಕಳ ನಾಳೆಗಳಿಗಾಗಿ ಜೀವ ತೇಯಲು ಬಂದ ದಂಪತಿಗಳು ತಮ್ಮ ಕರುಳ ಕುಡಿಯನ್ನೇ ಇಲ್ಲಿ ಬಲಿಯಾಗಿ ಅರ್ಪಿಸಿ ಹಿಂತೆರಳಬೇಕಾದದ್ದು ವಿಪರ್ಯಾಸ

ಮುದ್ದಾದ ಹಸುಳೆಯೊಂದು ಇನ್ನಿಲ್ಲದಂತೆ ಸಾವಿನ ತಕ್ಕೆಗೆ ಜಾರಿ ಹೋದಾಗ ಅಲ್ಲಿ ನೆರೆದ ಪ್ರತಿಯೊಬ್ಬರ ಕಣ್ಣ ಅಂಚಿನಿಂದ ಜಾರಿಹೋದ ಹನಿಗಳು ಉಳಿಸಿ ಹೋದ ಪ್ರಶ್ನೆಯೊಂದೇ… ಈ ಸಾವು ಅಷ್ಟೋಂದು ಕ್ರೂರಿಯೋ? ಕಠೋರಿಯೋ?

Exit mobile version