Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು: ಕರೋನಾ ನಿಯಂತ್ರಣ ಕ್ರಮಗಳ ಬಗ್ಗೆ ಸಂಸದ, ಶಾಸಕರಿಂದ ಪರಿಶೀಲನಾ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಹಾಗೂ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರ ನೇತೃತ್ವದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಆಡಳಿತ ಕಛೇರಿಯಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಯಿತು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕ್ವಾರಂಟೈನ್‌ನಲ್ಲಿರುವವರ ವಿವರ, ವಿದೇಶ, ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ಬಂದವರ ವಿವರವನ್ನು ಕಲೆಹಾಕುತ್ತಿರುವ ರೀತಿ, ಚಿಕಿತ್ಸಾ ಹಂತಗಳು, ಕೊವೀಡ್ ರೋಗಿಗಳ ಚಿಕಿತ್ಸೆ ನೀಡುವ ಆರೋಗ್ಯ ಸಿಬ್ಬಂಧಿಗಳಿಗೆ ಅಗತ್ಯವಿರುವ ಕಿಟ್, ಕ್ಷೇತ್ರ ವ್ಯಾಪ್ತಿಯಲ್ಲಿ ಪಡಿತರ ವಿತರಿಸಲಾಗುತ್ತಿರುವ ಕ್ರಮ, ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪಡಿತರ, ಪೊಲೀಸ್ ಇಲಾಖೆಯ ಭದ್ರತಾ ಕಾರ್ಯ, ಕೃಷಿ ಸಂಬಂಧಿತ ತೊಡಕುಗಳು, ಬೆಸಿಗೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಮೊದಲಾದವುಗಳ ಬಗೆಗೆ ಅಧಿಕಾರಿಗಳ ಮಾಹಿತಿ ಪಡೆದುಕೊಂಡು, ಪರಿಣಾಮಕಾರಿಯಾಗಿ ಆಗಬೇಕಾದ ಕ್ರಮಗಳ ಬಗೆಗೆ ಸೂಚಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ಮಾತನಾಡಿ ವಿವಿಧೆಡೆಗಳಲ್ಲಿ ನೆಲೆಸಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಜನರು ಕೊಲ್ಲೂರು, ಹೊಸಂಗಡಿ ಚೆಕ್‌ಪೋಸ್ಟ್ ತನಕ ಈಗಾಗಲೇ ಬಂದಿದ್ದರೆ ಮರಳಿ ಹಿಂದಕ್ಕೆ ಹೋಗಲು ಸೂಚಿಸುವ ಬದಲು, ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಒಳಕ್ಕೆ ಬಿಟ್ಟುಕೊಳ್ಳಿ. ಮನೆಗೆ ಕಳುಹಿಸಲು ಸಾಧ್ಯವಿಲ್ಲದಿದ್ದರೇ ಅವರಿಗೆ ಕೊಲ್ಲೂರಿನ ವಸತಿಗೃಹದಲ್ಲಿಯೇ ಹದಿನಾಲ್ಕು ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡಿ ತಂಗಲು ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.

ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ., ಎಎಸ್ಪಿ ಹರಿರಾಂ ಶಂಕರ್, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ್, ಬೈಂದೂರು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಪ್ರೇಮಾನಂದ್, ಬೈಂದೂರು ತಹಶೀಲ್ದಾರ್ ಬಿ. ಪಿ. ಪೂಜಾರಿ, ಕುಂದಾಪುರ ತಹಶೀಲ್ದಾರ್ ತಿಪ್ಪೆಸ್ವಾಮಿ, ಬೈಂದೂರು ಶಿಕ್ಷಣಾಧಿಕಾರಿ ಜ್ಯೋತಿ ಶ್ರೀನಿವಾಸ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ್, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ನಾಯ್ಕ್ ಮೊದಲಾದವರುಗಳು ವಿವಿಧ ಇಲಾಖೆಗಳ ಕಾರ್ಯಪ್ರಗತಿಯನ್ನು ವಿವರಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಈ ಸಂದರ್ಭ ಸಂಸದ ಬಿ. ವೈ. ರಾಘವೇಂದ್ರ ಅವರು ವೈಯಕ್ತಿಕವಾಗಿ 10,000ಫೇಸ್‌ಮಾಸ್ಕ್‌ಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದರು. ಎಡಮಾವಿನಹೊಳೆಯಲ್ಲಿ ನದಿಯ ಸೆಳೆತಕ್ಕೆ ಸಿಲುಕಿ ಮೃತರಾಗಿದ್ದ ಕಂಬದಕೋಣೆಯ ರಿತೇಶ್ ಶೆಟ್ಟಿ ಹಾಗೂ ವಂಶಿ ಶೆಟ್ಟಿ ಅವರ ಪೋಷಕರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ದೊರೆತ ತಲಾ 5 ಲಕ್ಷ ರೂ.ಗಳ ಚೆಕ್ ವಿತರಿಸಿದರು.

ಕೊಲ್ಲೂರು ದೇವಳದಿಂದ ನೌಕರರು ತಮ್ಮ ಒಂದು ದಿನದ ಸಂಬಳ 2,56,000 ರೂ.ಗಳ ಚೆಕ್‌ನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಟಿ. ಬಾಬು ಶೆಟ್ಟಿ, ಸುರೇಶ್ ಬಟವಾಡಿ, ಗೌರಿ ದೇವಾಡಿಗ, ಜ್ಯೋತಿ ಅಚ್ಚುತ ಎಂ, ರೋಹಿತ್ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಕುಂದರ್, ಬೈಂದೂರು ಬಿಜೆಪಿ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಪ್ರಿಯಾ ಕಮಲೇಶ್, ಕೆ. ವೆಂಕಟೇಶ್ ಕಿಣಿ ಮೊದಲಾದವರು ಇದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

Exit mobile version