Site icon Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು: ನೀರಿನಲ್ಲಿ ಮುಳುಗು ವ್ಯಕ್ತಿ ಸಾವು

ಬೈಂದೂರು: ನದಿಗೆ ಸ್ನಾನ ಮಾಡಲು ಇಳಿದ ವ್ಯಕ್ತಿಯೋರ್ವರು ನೀರಿನ ಸುಳಿಗೆ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ ಘಟನೆ ಶಿರೂರಿನ ಸಂಕದಗುಂಡಿ ಎಂಬಲ್ಲಿ ನಡೆದಿದೆ. ಗಿರೀಶ್(23) ಮೃತ ದುರ್ದೈವಿ.

ಘಟನೆಯ ವಿವರ: ತುಮಕೂರಿನಿಂದ ಶುಕ್ರವಾರ ರಾತ್ರಿ ಪ್ರವಾಸಕ್ಕೆಂದು ಹೊರಟಿದ್ದ ಅಲ್ಲಿನ ಟೊಯೊಟಾ ಸಪ್ಲಯರ‍್ಸ್ ಕಂಪೆನಿಯ 12 ಉದ್ಯೋಗಿಗಳು ಸಿಗಂದೂರು, ಜೋಗ ಹಾಗೂ ಮುರ್ಡೇಶ್ವರಕ್ಕೆ ತೆರಳಿ ಅಲ್ಲಿಂದ ಕೊಲ್ಲೂರಿಗೆ ತೆರಳುತ್ತಿರುವಾಗ ಮಾರ್ಗಮಧ್ಯೆ ಸಂಜೆ ೪:೩೦ರ ವೇಳೆಗೆ ಶಿರೂರಿನ ಸಮೀಪದ ಹೊಳೆಯನ್ನು ನೋಡಿ ತಮ್ಮ ಟೆಂಪೋ ಟ್ರಾವೆಲ್ಲರನ್ನು ನಿಲ್ಲಿಸಿ ಹೊಳೆಗಿಳಿದಿದ್ದಾರೆ. ಹೊಳೆಯಲ್ಲಿ ಸ್ನೇಹಿತರೊಂದಿಗೆ ಸ್ನಾನ ಮಾಡುತ್ತಿರುವಾಗ ಎಲ್ಲರಿಗಂತ ಸ್ವಲ್ಪ ಮುಂದೆ ಹೋಗಿದ್ದ ಗಿರೀಶ್ ಒಮ್ಮೆಲೆ ಹೆಚ್ಚಾದ ನೀರಿನ ರಭಸಕ್ಕೆ ನದಿಯಲ್ಲಿಯೇ ಕೊಚ್ಚಿಕೊಂಡು ಹೋಗಿದ್ದಾರೆ. ಗಿರೀಶ್‌ಗೆ ಈಜಲು ತಿಳಿದಿದ್ದರೂ ಕೂಡ ನೀರಿನ ಸುಳಿಗೆ ಸಿಕ್ಕಿದ್ದರಂದ ಅವರನ್ನು ರಕ್ಷಿಸಿಕೊಳ್ಳಲಾಗಲಿಲ್ಲ.

 ಇವರ ಜೊತೆಗಿದ್ದ ಸ್ನೇಹಿತರಿಗೂ ಈಜು ಬಾರದ ಕಾರಣ ಅಲ್ಲಿಂದ ಸ್ಥಳೀಯರಿಗೆ ಸ್ನೇಹಿತನನ್ನು ರಕ್ಷಿಸುವಂತೆ ಗೊಗರೆದಿದ್ದಾರೆ. ಆದರೆ ಸ್ಥಳಿಯರು ಅಲ್ಲಿಗೆ ಬರುವ ವೇಳೆಗಾಗಲೇ ವ್ಯಕ್ತಿಯು ಮೃತಪಟ್ಟಿದ್ದರು.

 ಮೃತ ಗಿರೀಶ್ ಹೊನ್ನಳಿಯವರಾಗಿದ್ದು ಕಳೆದ ಒಂದು ವರ್ಷದಿಂದ ಟೊಯೊಟಾ ಸಪ್ಲಯರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಬೈಂದೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಮೃತರ ಸಂಬಂಧಿಗಳು ಬರಬೇಕಾದುದರಿಂದ ಶವವನ್ನು ಬೈಂದೂರಿನ ಸರಕಾರಿ ಆಸ್ವತ್ರೆಯ ಶವಗಾರದಲ್ಲಿಡಲಾಗಿದೆ.

Exit mobile version