Kundapra.com ಕುಂದಾಪ್ರ ಡಾಟ್ ಕಾಂ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 3 ತಿಂಗಳು ಉಚಿತ ಗ್ಯಾಸ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಕೇಂದ್ರ ಸರಕಾರ ಮೂರು ತಿಂಗಳು ಉಚಿತ ಗ್ಯಾಸ್ ಸಿಲಿಂಡರ್ ವಿತರಿಸುತ್ತಿದ್ದು, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗರೀಬ್ ಕಲ್ಯಾಣ ಯೋಜನೆಯಡಿ ಎಪ್ರಿಲ್, ಮೇ ಹಾಗೂ ಜೂನ್ ತಿಂಗಳು ಉಚಿತ ಗ್ಯಾಸ್ ಸಿಲಿಂಡರ್ ರಿಫೀಲ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಗ್ಯಾಸ್ ಕಂಪೆನಿ ವತಿಯಿಂದ ಆಧಾರ್ ನೊಂದಾಯಿತ ಬ್ಯಾಂಕ್ ಖಾತೆಗೆ ಎಪ್ರಿಲ್ ಮೊದಲ ವಾರವೇ ಮೊದಲನೇ ರೀಫಿಲ್ ಹಣವನ್ನು ಜಮಾ ಮಾಡಲಾಗುತ್ತದೆ. ಗ್ರಾಹಕರು ಪ್ರತಿ ತಿಂಗಳು ಜಮಾ ಆದ ಹಣವನ್ನು ಗ್ಯಾಸ್ ಏಜೆನ್ಸಿಗೆ ಪಾವತಿಸಿ ಸಿಲಿಂಡರ್ ಪಡೆಯಬಹುದಾಗಿದೆ. ಮೊದಲ ತಿಂಗಳು ಜಮಾ ಆದ ಹಣದಿಂದ ಗ್ಯಾಸ್ ಸಿಲಿಂಡರ್ ಪಡೆಯದೇ ಇದ್ದರೇ ಮುಂದಿನ ಎರಡು ತಿಂಗಳು ಗ್ಯಾಸ್ ಸಿಲಿಂಡರ್ ವಿತರಿಸಲಾಗುವುದಿಲ್ಲ.

ಗ್ಯಾಸ್ ಬುಕ್ಕಿಂಗ್ ಮಾಡುವವರು ಕಡ್ಡಾಯವಾಗಿ ನೊಂದಾಯಿತ ಮೊಬೈಲ್ ಸಂಖ್ಯೆಯಿಂದ IVRS ಬುಕ್ಕಿಂಗ್ ಮೂಲಕ ಮಾಡಬೇಕಾಗಿದ್ದು, ಸಿಲಿಂಡರ್ ಪಡೆಯುವ ಸಂದರ್ಭದಲ್ಲಿಯೂ ಮೊಬೈಲ್ ಸಂಖ್ಯೆಗೆ ಬರುವ OTP ಸಂಖ್ಯೆಯನ್ನು ಡೆಲಿವರಿ ಮ್ಯಾನ್‌ಗೆ ಕಡ್ಡಾಯವಾಗಿ ನೀಡುವುದು. ಅದು ಸಾಧ್ಯವಾಗದಿದ್ದಲ್ಲಿ ಡೆಲಿವರಿ ಬಾಯ್ OMC ಮೊಬೈಲ್ ಅಪ್ಲಿಕೇಶನ್ ಮೂಲಕ ಜಿಯೋ ಟ್ಯಾಗಿಂಗ್ ಬಳಸಿ ವಿತರಣೆ ಖಚಿತಪಡಿಸುವುದು ಅಥವಾ ಸ್ವೀಕೃತಿ ಖಚಿತಪಡಿಸಲು ಘೋಷಣಾ ಫಾರ್ಮ್‌ನಲ್ಲಿ ಸಹಿ/ಹೆಬ್ಬೆಟ್ಟು ಪಡೆಯುವುದು.

ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆ ನೊಂದಾವಣೆಯಾಗದಿದ್ದಲ್ಲಿ ಗ್ಯಾಸ್ ವಿತರಕರನ್ನು, ಬ್ಯಾಂಕ್ ಖಾತೆಗೆ ಹಣ ಜಮಾ ಆಗದಿದ್ದಲ್ಲೇ ಯೋಜನೆಗೆ ಲಿಂಕ್ ಮಾಡಲಾಗಿರುವ ನಿಮ್ಮ ಬ್ಯಾಂಕನ್ನು ಸಂಪರ್ಕಿಸುವಂತೆ ಸಂಸದರು ತಿಳಿಸಿದ್ದಾರೆ. /ಕುಂದಾಪ್ರ ಡಾಟ್ ಕಾಂ/

Exit mobile version