ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೊರೊನಾ ಪ್ರಸರಣ ತಡೆಗಾಗಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ, ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿದೆ. ಆದರೆ ಬೈಂದೂರು ವಿಧಾನಸಭಾ ಕ್ಷೇತ್ರದ ಹಲವೆಡೆ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಇದರ ವಿರುದ್ಧ ತಕ್ಷಣ ಕ್ರಮ ಕೈಗೊಂಡು ಅದನ್ನು ತಡೆಗಟ್ಟಬೇಕು ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಜಿಲ್ಲಾ ಅಬಕಾರಿ ಅಧಿಕಾರಿಗೆ ಸೂಚಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆಸಿದ ಕ್ಷೇತ್ರದ ಅಧಿಕಾರಿಗಳ ಸಭೆಯ ನಡುವೆ ಜಿಲ್ಲಾ ಅಬಕಾರಿ ಅಧಿಕಾರಿಗೆ ದೂರವಾಣಿಯ ಮೂಲಕ ಈ ಸೂಚನೆ ನೀಡಿದರು. ಕ್ಷೇತ್ರಕ್ಕೆ 386 ಜನರು ವಿದೇಶಗಳಿಂದ ಹಿಂತಿರುಗಿದ್ದಾರೆ. ಇವರ ಕ್ವಾರಂಟೈನ್ ಅವಧಿ ಮುಗಿದಿದೆ. ಹೊರ ಜಿಲ್ಲೆಗಳಿಂದ ವಾಪಸಾಗಿರುವ 20,669 ಜನರು ಆರೋಗ್ಯವಾಗಿ ಇದ್ದಾರೆ. ಇಲ್ಲಿ ಸೋಂಕಿತರು ಇಲ್ಲ. ಆದರೆ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೋಂಕಿತರು ಇರುವುದರಿಂದ ಎಲ್ಲರೂ ಮನೆಯೊಳಗೇ ಇರಬೇಕಾಗುತ್ತದೆ. ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅವರ ಮೇಲೆ ಮುಂದೆಯೂ ನಿಗಾ ಇಡುವುದರ ಜತೆಗೆ ಮಹಾರಾಷ್ಟ್ರದಿಂದ ಉತ್ತರ ಕನ್ನಡ ಜಿಲ್ಲೆಯ ಮೂಲಕ ಇಲ್ಲಿಗೆ ಬರುವವರನ್ನು ತಡೆಯುವ ಕೆಲಸ ಮುಂದುವರಿಯಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಪಡಿತರ ವಿತರಿಸುವಾಗ ಒಟಿಪಿ ಕೇಳಬಾರದು. ರೇಷನ್ ಕಾರ್ಡ್ ಇಲ್ಲದ ಅರ್ಹರಿಗೂ ಪಡಿತರ ನೀಡಬೇಕು. ಬೇಸಿಗೆ ಬಂದಿರುವುದರಿಂದ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಬೇಕು ಎಂದ ಅವರು ಬೈಂದೂರಿನ ಜನರು ಲಾಕ್‌ಡೌನ್‌ಗೆ ಸೂಕ್ತವಾಗಿ ಸ್ಪಂದಿಸಿದ್ದಾರೆ. ಆರೋಗ್ಯ, ಪೊಲೀಸ್ ಹಾಗೂ ಅನ್ಯ ಇಲಾಖೆಗಳ ಅಧಿಕಾರಿಗಳ ನೌಕರರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಪ್ರಸರಣ ತಡೆಯಲು ಮತ್ತು ಲಾಕ್‌ಡೌನ್ ನಿರ್ಬಂಧ ಜಾರಿಗೊಳಿಸಲು ಶಕ್ತಿಮೀರಿ ಶ್ರಮಿಸಿದ್ದಾರೆ. ಸಂಘ, ಸಂಸ್ಥೆಗಳು ಮುಕ್ತವಾಗಿ ನೆರವು ನೀಡಿವೆ. ಅವರೆಲ್ಲರನ್ನು ಅಭಿನಂದಿಸುತ್ತೇನೆ ಎಂದರು.
ತಹಶೀಲ್ದಾರ್ ಬಸಪ್ಪ ಪಿ. ಪೂಜಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ. ಬಾಬು ಶೆಟ್ಟಿ, ಗೌರಿ ದೇವಾಡಿಗ, ಸುರೇಶ ಬಟವಾಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಾರತಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಬಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶಂಕರ ಶೆಟ್ಟಿ, ಪೊಲೀಸ್ ಸರ್ಕಲ್ ಸುರೇಶ ನಾಯ್ಕ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರೇಮಾನಂದ, ಸಬ್ ಇನ್ಸ್‌ಪೆಕ್ಟರ್ ಸಂಗೀತಾ, ಮೆಸ್ಕಾಂ ಇಂಜಿನಿಯರ್ ವಿನಾಯಕ ಕಾಮತ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.