ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಹುಟ್ಟೂರು ಕೆರಾಡಿಯಲ್ಲಿ ವಾಸವಿರುವ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಮಗ ರಣ್ವಿತ್ ಶೆಟ್ಟಿಯ ಹುಟ್ಟುಹಬ್ಬವನ್ನು ಸರಳ ಹಾಗೂ ಪಕ್ಕಾ ಗ್ರಾಮೀಣ ಸೊಗಡಿನೊಂದಿಗೆ ಆಚರಿಸಿ ಗಮನ ಸೆಳೆದಿದ್ದಾರೆ.
ಮಗ ರಣ್ವಿತ್ ಶೆಟ್ಟಿಯ ಮೊದಲ ವರ್ಷದ ಹುಟ್ಟುಹಬ್ಬವನ್ನು ತಮ್ಮ ಮನೆಯ ಸುತ್ತಲಿನ ತೋಟದ ತೆಂಗು, ಅಡಿಕೆಯ ಹಿಂಗಾರ, ಬಾಳೆಗೋನೆ, ಹಲಸು, ಹೂ, ಹಣ್ಣುಗಳನ್ನೇ ಬಳಸಿಕೊಂಡು ಚಂದದ ವೇದಿಕೆ ನಿರ್ಮಿಸಿ, ಹಳೆಯ ವಸ್ತುಗಳಿಂದ ಅಲಂಕರಿಸಿ, ಮನೆಯಲ್ಲಿಯೇ ತಯಾರಿಸಿದ ಕೇಕ್ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇನ್ನು ಹುಟ್ಟುಹಬ್ಬದಲ್ಲಿ ಅವರ ಕುಟುಂಬದವರು ಮಾತ್ರವೇ ಪಾಲ್ಗೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಎ.7ರಂದು ಮಗನ ಹುಟ್ಟುಹಬ್ಬದ ಸಂಭ್ರಮವನ್ನು ರಿಷಬ್ ಶೆಟ್ಟಿ ಹಾಗೂ ಅವರ ಮಡದಿ ಪ್ರಗತಿ ರಿಷಬ್ ಶೆಟ್ಟಿ ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಂಡಿದ್ದು, ಒಂದು ವೀಡಿಯೋವನ್ನು ಕೂಡ ರಿಲೀಸ್ ಮಾಡಿದ್ದರು. ಈ ಬಗ್ಗೆ ತಮ್ಮ ಫೇಸ್ಬುಕ್ ಖುಷಿ ಹಂಚಿಕೊಂಡಿರುವ ರಿಷಬ್, “ವರುಷದ ಹಿಂದೆ ಈ ದಿನ, ನನ್ನೊಳಗೊಬ್ಬ ಅಪ್ಪನೂ, ನನ್ನ ಮಡದಿಯೊಳಗೊಬ್ಬಳು ಅಮ್ಮನೂ ಹುಟ್ಟಿದೆವು. ಬದುಕುವುದನ್ನು ಅಪ್ಪ ಕಲಿಸಿದ್ದರೂ, ಒಬ್ಬ ಅಪ್ಪನಾಗಿ ಬದುಕುವುದನ್ನು ಕಲಿಸಲು ಮಗನಿಂದ ಮಾತ್ರ ಸಾಧ್ಯ ! ಆ ನನ್ನ ಕಲಿಕೆಗಿಂದು ವರ್ಷದ ಆನಿವರ್ಸರಿ. ಮೊದಲ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಈ ಕಂದ ನಮ್ಮ ಮನೆಯ ನಿತ್ಯದ ಹಬ್ಬ. ಇವನ ಮುಗ್ಧತೆ ಮನೆಗೆ ದೀಪ, ತೊದಲು ಮಾತೇ ತಳಿರು ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ. ನಮ್ಮ ಮನೆಯ ಅಷ್ಟಮಿಯ ಕೃಷ್ಣನೂ ಇವನೇ, ನವಮಿಯ ರಾಮನೂ ಇವನೇ. ಈ ಶುಭ ದಿನದಂದು ಸಕಲ ಸುಖ ಸಂತೋಷಗಳ ಜೊತೆ ನಿಮ್ಮೆಲ್ಲರ ಆಶಿರ್ವಾದವೂ ಇವನಿಗಿರಲಿ ಎಂದು ಬಯಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ. /ಕುಂದಾಪ್ರ ಡಾಟ್ ಕಾಂ/
