ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕೊರೋನಾ ವೈರಸ್ ತಡೆಗಟ್ಟುವಲ್ಲಿ ಉಡುಪಿ ಜಿಲ್ಲೆಯಲ್ಲಿ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮದಿಂದಾಗಿ ಜಿಲ್ಲೆಯಲ್ಲಿ ವೈರಸ್ ಸರಪಣಿ ಕಡಿತಗೊಂಡು ಸಕಾರಾತ್ಮಕದ ಸ್ಪಂದನೆ ದೊರಕಿದ್ದು, ಜಿಲ್ಲೆಗೆ ದೊಡ್ಡ ರಿಲೀಫ್ ದೊರಕಿದಂತಾಗಿದೆ.
ಜಿಲ್ಲೆಯಲ್ಲಿ ಈವರೆಗೆ ವರದಿಯಾಗಿದ್ದ ಮೂರು ಕೊರೋನಾ ಪಾಸಿಟಿವ್ ಪ್ರಕರಣಗಳಲ್ಲಿ ಮೂವ ವ್ಯಕ್ತಿಗಳೂ ಗುಣಮುಖರಾಗಿದ್ದು ಸದ್ಯದಲ್ಲೇ ಅವರನ್ನು ಬಿಡುಗಡೆಗೊಳಿಸಲಾಗುತ್ತಿದೆ. ಆದರೆ ಜಿಲ್ಲೆಯ ಎಲ್ಲಾ ಗಡಿಗಳನ್ನು ಈಗಾಗಲೇ ಸೀಲ್‌ಡೌನ್ ಮಾಡಲಾಗಿದ್ದು, ಜಿಲ್ಲೆಗೆ ಬರುವುದು ಮತ್ತು ಜಿಲ್ಲೆಯಿಂದ ತೆರಳುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಲಾಕ್‌ಡೌನ್ ಘೋಷಣೆಯಾದ ದಿನದಿಂದ ಜಿಲ್ಲೆಯಲ್ಲಿ ಕೊರೋನಾ ತಡೆಗಟ್ಟುವಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಮುತುವರ್ಜಿಯಿಂದಲೇ ಕಾರ್ಯನಿರ್ವಹಿಸಿದ್ದು, ಲಾಕ್‌ಡೌನ್ ಆದೇಶ ಪಾಲನೆಗೆ ಒತ್ತು ನೀಡುವುದರ ಜೊತೆಗೆ, ಜನಸಾಮಾನ್ಯರಿಗೆ ಆಗುತ್ತಿದ್ದ ತೊಂದರೆ ನಿವಾರಣೆಗೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ಎಲ್ಲಾ ಕಟ್ಟುನಿಟ್ಟಿನ ಕ್ರಮದಿಂದಾಗಿ ಉಡುಪಿ ಜಿಲ್ಲೆ ದೊಡ್ಡ ಗಂಡಾಂತರದಿಂದ ಪಾರಾಗಿದ್ದು, ಲಾಕ್‌ಡೌನ್ ಬಳಿಕವೂ ಹಂತ ಹಂತವಾಗಿ ನಿರ್ಬಂಧ ತೆರವುಗೊಳಿಸಿದರೆ ಕೊರೋನಾ ಆತಂಕದಿಂದ ಸಂಪೂರ್ಣ ದೂರವಾಗಲು ಸಾಧ್ಯವಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಜಿಲ್ಲೆಯಲ್ಲಿನ ಕೊರೋನಾ ಪ್ರಕರಣಗಳ ಬಗೆಗೆ ಮಾಹಿತಿ ಹಂಚಿಕೊಂಡಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದ ಮೂವರು ವ್ಯಕ್ತಿಗಳು ಗುಣಮುಖರಾಗಿದ್ದಾರೆ. ಈ ಮೂವರಿಗೂ ಪ್ರಾಥಮಿಕ ಹಾಗೂ ದ್ವಿತೀಯ ಹಂತದಲ್ಲಿ ಸಂಪರ್ಕದಲ್ಲಿದ್ದ ಎಲ್ಲರನ್ನೂ ಚಿಕಿತ್ಸೆ ಒಳಪಡಿಸಿದ್ದರೂ ಅವರೆಲ್ಲರಿಗೂ ವರದಿಯಲ್ಲಿ ನೆಗಿಟಿವ್ ಬಂದಿದೆ. ಜಿಲ್ಲೆಯ ಗಡಿಗಳನ್ನು ಈಗಾಗಲೇ ಸೀಲ್ ಮಾಡಲಾಗಿದ್ದು, ಎಲ್ಲರೂ ತಾವು ಸದ್ಯ ಇರುವಲ್ಲಿಯೇ ಉಳಿದುಕೊಳ್ಳುವುದು ಒಳ್ಳೆಯದು ಎಂದಿದ್ದಾರೆ.