Kundapra.com ಕುಂದಾಪ್ರ ಡಾಟ್ ಕಾಂ

ತುರ್ತು ಅಗತ್ಯಗಳಿಗಷ್ಟೇ ಜಿಲ್ಲೆಯ ಗಡಿ ಪ್ರವೇಶಿಸಲು ಅವಕಾಶ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟಲು ಕೈಗೊಂಡಿರುವ ಕ್ರಮಗಳು ಹಾಗೂ ಅನುಸರಿಸಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಶನಿವಾರ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಮುಜರಾಯಿ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.

 

ಈ ಸಂದರ್ಭ ಅವರು ಅಧಿಕಾರಿಗಳಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡರು. ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ವಿನಾಯಿತಿ. ಈಗಾಗಲೇ ಬೆಳೆದಿರುವ ಬೆಳೆಗಳ ಸಾಗಾಟಕ್ಕೂ ಯಾವುದೇ ಅಡ್ಡಿಪಡಿಸದಿರುವುದು, ತಾಲೂಕಿನಲ್ಲಿ ರಾಜ್ಯ ಸರಕಾರದ ಆದೇಶದಂತೆ ಅಗತ್ಯವಿರುವ ಎಪಿಎಲ್ ಕುಟುಂಬಗಳಿಗೂ ಅಕ್ಕಿ ನೀಡುವುದು. ವಲಸೆ ಕಾರ್ಮಿಕರಿಗೆ ಊಟ ವಸತಿ, ಕಟ್ಟಡ ಹಾಗೂ ಇತರೆ ಕಾರ್ಮಿಕರಿಗೆ ಸರಕಾರದಿಂದ ದೊರೆಯಬೇಕಾದ ಸವಲತ್ತುಗಳು ಶೀಘ್ರ ದೊರೆಯುವಂತೆ ಮಾಡುವುದು, ಭದ್ರತೆಗೆ ಒತ್ತು ನೀಡುವುದು ಹಾಗೂ ವಿನಾಯಿತಿ ಇರುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸುವುದು ಸೇರಿದಂತೆ ಹಲವು ವಿಷಯಗಳು ಸಭೆಯಲ್ಲಿ ಚರ್ಚೆಯಾದವು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಯಾವುದೇ ಗಡಿಯಲ್ಲಿ ಆರೋಗ್ಯ ಸಮಸ್ಯೆ, ಕುಟುಂಬಿಕರ ಮರಣ, ತುಂಬು ಗರ್ಭಿಣಿಯರು ಬಂದರೆ ಅಂಥ ಸಂದರ್ಭವನ್ನು ಹೊರತುಪಡಿಸಿ ಮತ್ಯಾರನ್ನೂ ಒಳಕ್ಕೆ ಬಿಡಲಾಗುತ್ತಿಲ್ಲ. ಚಿಕಿತ್ಸೆಗೆ ತೆರಳುವವರಿಗೆ ಅಡ್ಡಿಪಡಿಸುವುದಿಲ್ಲ. ಒಳದಾರಿಯಲ್ಲಿ ಬೇರೆ ಜಿಲ್ಲೆಗಳಿಂದ ಪ್ರವೇಶ ಮಾಡುವುದು ಅಪರಾಧವಾಗಿದ್ದು, ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಹಾಗೆ ಪ್ರವೇಶ ಮಾಡಿದ್ದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಆಶಾ ಕಾರ್ಯಕರ್ತರು, ವೈದ್ಯರು, ಪೊಲೀಸರು, ಆರೋಗ್ಯ ಹಾಗೂ ಕಾನೂನು ಸುವಸ್ಥೆಗೆ ಕಾಯ್ದುಕೊಳ್ಳುವಲ್ಲಿ ಅಡ್ಡಿಪಡಿಸಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನದ ಯಕ್ಷಗಾನ ಮೇಳಗಳ ಕಲಾವಿದರ ಸಂಬಳ ಕಡಿತ ಮಾಡದಂತೆ ಆದೇಶ ಮಾಡಲಾಗಿದೆ. ಸಾಲಿಗ್ರಾಮ ಹಾಗೂ ಪೆರ್ಡೂರು ಮೇಳಕ್ಕೂ ದೇವಸ್ಥಾನಕ್ಕೂ ನೇರ ಸಂಬಂಧವಿಲ್ಲದ ಕಾರಣ ಪರ್ಯಾಯ ವ್ಯವಸ್ಥೆಯ ಬಗ್ಗೆ ಯೋಚಿಸಲಾಗುತ್ತದೆ. ಡೇರೆ ಮೇಳದ ಕಲಾವಿದರು ಮನವಿ ಸಲ್ಲಿಸಿದ್ದು, ಪರಿಶೀಲನೆ ಮಾಡಲಾಗುತ್ತದೆ ಎಂದ ಅವರು ಮೀನುಗಾರರ ಉಳಿತಾಯ ಪರಿಹಾರ ನಿಧಿ ಕಳೆದ ಮೂರು ವರ್ಷದಿಂದ ಬಂದಿರಲಿಲ್ಲ. ಒಂದು ತಿಂಗಳ ಹಿಂದೆ ಕೇಂದ್ರ ಸರ್ಕಾದ ಜೊತೆ ಚರ್ಚೆ ಮಾಡಿ, 5.5 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಿದೆ. ಮೀನುಗಾರರ ಉಳಿತಾಯದ ಹಣದೊಂದಿಗೆ, ಕೇಂದ್ರ, ರಾಜ್ಯ ಸರ್ಕಾರವೂ ಅಷ್ಟೇ ಹಣ ಸೇರಿಸಿ ಪಾವತಿ ಮಾಡಲಿದೆ ಎಂದರು. ಲಾಕ್‌ಡೌನ್ ಹೊರತಾಗಿ ಈಗಾಗಲೇ ಮದುವೆ ದಿನಾಂಕ ನಿಗದಿಯಾಗಿದ್ದರೆ, ೮ ಜನರಷ್ಟೇ ಇದ್ದು ಮದುವೆ ಮಾಡಬಹುದು ಎಂದರು.

ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ತಾಪಂ ಕುಂದಾಪುರ ಇಓ ಕೇಶವ ಶೆಟ್ಟಿಗಾರ್, ಬೈಂದೂರು ಇಓ ಭಾರತಿ ಇದ್ದರು. ಸಭೆಯಲ್ಲಿ ಇವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. /ಕುಂದಾಪ್ರ ಡಾಟ್ ಕಾಂ ಸುದ್ದಿ/

ಇದನ್ನೂ ಓದಿ:
► ಉಡುಪಿ ಸದ್ಯಕ್ಕೆ ಕೊರೋನಾ ಮುಕ್ತ ಜಿಲ್ಲೆ. ಮೂವರು ಆಸ್ಪತ್ರೆಯಿಂದ ಡಿಸ್ಚಾರ್ಜ್ – https://kundapraa.com/?p=36996 .

 

Exit mobile version