ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲಾಕ್ ಡೌನ್‌ನ ಸಂಕಷ್ಟದ ಸಂದರ್ಭದಲ್ಲಿ ಊಟಕ್ಕೆ ಕಷ್ಟಪಡುತ್ತಿದ್ದ ವಲಸೆ ಕಾರ್ಮಿಕರಿಗೆ ನಿತ್ಯವೂ ಎರಡು ಹೊತ್ತಿನ ಊಟ ಒದಗಿಸುತ್ತಿದ್ದ ಕುಂದಾಪುರದ ಡಿವೈಎಫ್‌ಐ, ಸ್ಟಾರ್ ಫ್ರೆಂಡ್ಸ್ ಮತ್ತು ಸಮುದಾಯ ಸಂಘಟನೆಗಳ ಮಾನವೀಯ ಕಾರ್ಯ ಶ್ಲಾಘನೀಯ ಎಂದು ಕುಂದಾಪುರ ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಹರೀಶ್ ನಾಯ್ಕ್ ಹೇಳಿದರು.
ಅವರು ಲಾಕ್ ಡೌನ್ ಸಡಿಲಿಕೆಯ ಮುನ್ನಾ ದಿನ ಸಂಜೆ ಮೇ 3 ರಂದು ಈ ಸಂಘಟನೆಗಳು ಏರ್ಪಡಿಸಿದ್ದ ಸಾಂಕೇತಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಲಾಕ್ ಡೌನ್ ವೇಳೆ ಕುಂದಾಪುರದಲ್ಲಿ ಅತಂತ್ರರಾಗಿ ಸಿಲುಕಿ ಹಾಕಿಕೊಂಡಿರುವ 40 ರಷ್ಟು ವಲಸೆ ಕಾರ್ಮಿಕರಿಗೆ ಕುಂದಾಪುರದ ಡಿವೈಎಫ್‌ಐ, ಸ್ಟಾರ್ ಫ್ರೆಂಡ್ಸ್ ಮತ್ತು ಸಮುದಾಯ ಸಂಘಟನೆಗಳು 35 ದಿನಗಳ ಕಾಲ ನಿತ್ಯವೂ ಎರಡು ಹೊತ್ತಿನ ಊಟ ನೀಡಿದ್ದವು. ಲಾಕ್ ಡೌನ್ ಸಡಿಲಿಕೆಯ ಹಿನ್ನೆಲೆಯಲ್ಲಿ ಈಗ ಈ ಊಟ ನೀಡುವ ಕಾರ್ಯಕ್ಕೆ ವಿರಾಮ ನೀಡಿ ಸಾಂಕೇತಿಕ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಊಟ ತಯಾರಿಸಲು ಶ್ರಮಿಸಿದ ಸ್ವರ್ಣಲೇಖಾ ಮತ್ತು ಶೈಲಾ ಹಾಗೂ ಈ ಯೋಜನೆಯ ಪ್ರಮುಖ ಉಸ್ತುವಾರಿ ವಹಿಸಿದ್ದ ಡಿವೈಎಫ್‌ಐ ಮುಖಂಡ ರಾಜೇಶ ವಡೇರಹೋಬಳಿ ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ವಲಸೆ ಕಾರ್ಮಿಕರಿಗೆ ತಯಾರಿಸಿದ್ದ ವಿಶೇಷ ಊಟವನ್ನು ಅಚ್ಚುಕಟ್ಟಾದ ವ್ಯವಸ್ಥೆಯಲ್ಲಿ ವಿತರಿಸಲಾಯಿತು. ಪ್ರತಿಯೊಂದು ಭಕ್ಷ್ಯವನ್ನೂ ಪ್ರತ್ಯೇಕ ಟೇಬಲ್‌ನಲ್ಲಿ ಇಟ್ಟು ಸ್ವತಃ ಕಾರ್ಮಿಕರೇ ಒಂದೊಂದಾಗಿ ಎತ್ತಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಕಟ್ಟುನಿಟ್ಟಾದ ಸಾಮಾಜಿಕ ಅಂತರವನ್ನು ಕಾಪಾಡಲಾಗಿತ್ತು. ಜೊತೆ ಎಲ್ಲರೂ ಮಾಸ್ಕ್ ಹಾಗೂ ಸ್ಯಾನಿಟೈಝರ್ ಬಳಕೆಯನ್ನು ಮಾಡಿದ್ದರು.
ಕೋವಿಡ್ 19 ಸಂದರ್ಭದಲ್ಲಿ ಜನರ ನೆರವಿಗೆ ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ್‌ಗಳಾದ ಪೊಲೀಸ್ ಇಲಾಖೆ, ರೆಡ್ ಕ್ರಾಸ್ ಹಾಗೂ ಉಟ ವಿತರಿಸಿದ ಮೂರು ಸಂಘಟನೆಗಳಿಗೆ ಚಪ್ಪಾಳೆಯ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಾಂಕೇತಿಕ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಕಾರ್ಮಿಕ ಮುಖಂಡರಾದ ಬಾಲಕೃಷ್ಣ ಶೆಟ್ಟಿ ಕೆ. ಶಂಕರ್, ಸಮುದಾಯ ಸಂಘಟನೆಯ ಸಂಧ್ಯಾ ನಾಯಕ್, ಪತ್ರಕರ್ತ ಶಶಿಧರ ಹೆಮ್ಮಾಡಿ, ರೆಡ್ ಕ್ರಾಸ್ ಸಂಸ್ಥೆಯ ವಿರೇಂದ್ರ, ಸ್ಟಾರ್ ಫ್ರೆಂಡ್ಸ್‌ನ ಗಣೇಶ ಮೆಂಡನ್, ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಾಜಾ ಮಠದಬೆಟ್ಟು, ಸಿಯುಟಿಯು ಮುಖಂಡರಾದ ರಾಜು ದೇವಾಡಿಗ, ರಮೇಶ ವಡೇರಹೋಬಳಿ ಮುಂತಾದವರು ಉಪಸ್ಥಿತರಿದ್ದರು.