ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ನನಗೆ ಪೊಲೀಸರ ಭದ್ರತೆ ಬೇಡ, ಕಾರ್ಯಕರ್ತರೇ ಶ್ರೀರಕ್ಷೆ. ರಾಜ್ಯದ ಜನಸಂಖ್ಯೆ ಹೋಲಿಸಿದರೆ ಪೊಲೀಸರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಇಬ್ಬರು ಗನ್‌ಮ್ಯಾನ್‌ಗಳಿಗೂ ವಾಪಾಸ್ ಕಳುಹಿಸಿದ್ದೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಕುಂದಾಪುರದಲ್ಲಿ ವಿದೇಶಗಳಿಂದ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ನಿತ್ಯವೂ ವಿದೇಶದಿಂದ ಹಲವು ಇಂಟರ್‌ನೆಟ್ ಬೆದರಿಕೆ ಕರೆ ಬರುತ್ತಿದೆ. ಈ ಬಗ್ಗೆ ರಾಜ್ಯದ ಡಿಜಿಪಿ ಪ್ರವೀಣ್ ಸೂದ್ ಬಳಿ ಮಾತನಾಡಿದ್ದೇನೆ. ತನಿಖೆ ನಡೆಸುವಂತೆ ಮನವಿ ಮಾಡಿದ್ದೇನೆ. ಕಳೆದ ೨ ವರ್ಷದಿಂದ ಇಂತಹ ಕರೆ ಬರುತ್ತಿದ್ದ ಬಗ್ಗೆ ಈ ಹಿಂದೆಯೂ ದೂರು ನೀಡಲಾಗಿತ್ತು. ಪಿಎಫ್‌ಐ ಹಾಗೂ ಎಸ್‌ಡಿಪಿಐ ವಿರುದ್ಧ ಮಾತನಾಡಿದಾಗ ಇಂತಹ ಕರೆಗಳು ಬಂದಿದ್ದವು ಇತ್ತೀಚೆಗೆ ತಬ್ಲಿಘಿ ಜಮಾತ್ ಬಗ್ಗೆ ಮಾತನಾಡಿದ್ದಕ್ಕೆ ಹೀಗೆ ಕರೆಗಳು ಬರುತ್ತಿದೆ. ಹೀಗೆ ಬೆದರಿಕೆ ಹಾಕುತ್ತಿರುವ ಕರೆಯ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದು, ತನಿಕೆ ನಡೆಸಲಿ ಎಂದರು.
ಪಡಿಯಾರ್ ಮನೆಗೆ ಭೇಟಿ:
ಸಂಘ ಪರಿವಾರದ ಹಿರಿಯ ಕಾರ್ಯಕರ್ತ ಡಾ.ಎಸ್.ಎನ್.ಪಡಿಯಾರ್ ಅವರ ಮನೆಗೆ ಭೇಟಿ ನೀಡಿ ಪ್ರಧಾನಿ ಪರಿಹಾರ ನಿಧಿಗೆ ವೇದಗಣಿತ ಅಧ್ಯಯನ ವೇದಿಕೆಯಿಂದ ೫ ಲಕ್ಷ ರೂ. ನೆರವು ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದ ಅವರು, ಅರುಣಾ ಎಸ್.ಎನ್.ಪಡಿಯಾರ್ ಅವರು ವಯಕ್ತಿಕವಾಗಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಿದ ಚೆಕ್‌ನ್ನು ಸ್ವೀಕರಿಸಿದರು./ಕುಂದಾಪ್ರ ಡಾಟ್ ಕಾಂ ಸುದ್ದಿ/

