Kundapra.com ಕುಂದಾಪ್ರ ಡಾಟ್ ಕಾಂ

ಅಮ್ಮ ಎಂಬ ಪ್ರೀತಿಯ ಸಾಕಾರಮೂರ್ತಿ

ಚೈತ್ರ ಆಚಾರ್ಯ ಕೋಟ | ಕುಂದಾಪ್ರ ಡಾಟ್ ಕಾಂ ಲೇಖನ.
ನಾವು ಪ್ರೀತಿಸಿದರೆ ನಮ್ಮನ್ನು ಪ್ರೀತಿಸುವ ಕೆಲವು ಹೃದಯಗಳಾದರು ನಮಗೆ ಸಿಗಬಹುದು. ಆದರೆ ನಾವು ಪ್ರೀತಿಸದಿದ್ದರೂ ನಮ್ಮನ್ನು ಪ್ರೀತಿಸುವ ನಿಶ್ಕಲ್ಮಶ ಹೃದಯವೊಂದಿದ್ದರೆ ಅದು ತಾಯಿ ಮಾತ್ರ. ನಿಜ, ಆ ನಿಶ್ಕಲ್ಮಶ ಪ್ರೀತಿಯನ್ನು ಬಗ್ಗೆ ಬರೆಯಲು ಹೊರಟರೆ ಭಾಷೆಯು ಬಡವಾಗುತ್ತದೆ. ಅಂತಹ ಅದ್ಬುತ ಶಕ್ತಿ ತಾಯಿ. ಬದುಕಿನ ಪುಸ್ತಕದ ಪುಟಗಳನ್ನು ಒಮ್ಮೆ ಹಿಂದೆ ತಿರುವಿ ಹಾಕಿ ನೋಡಿ, ಅದರಲ್ಲಿ ಪ್ರತೀ ಪುಟದಲ್ಲೂ ಕಾಣುವ ಹೆಸರೇ ಅಮ್ಮ. ಮೊದಲ ತೊದಲ ನುಡಿಯು ಅಮ್ಮ, ಹಸಿದಾಗ ತುತ್ತು ತಿನಿಸುವ ಕೈಗಳು ಅಮ್ಮ, ಕಣ್ಣೀರ ಒರೆಸುವ ಬೆರಳು ಅಮ್ಮ, ಒಡಲೊಳಗಿನ ಕರೆಗಳಿಗೆ ಕಿವಿಯು ಅಮ್ಮ.

ಎಂದಿಗೂ ನಾವು ಮರಳಿ ಕೊಡಲಾಗದ ಪ್ರೀತಿ ಅಂದ್ರೆ ಅದು ತಾಯಿ ಪ್ರೀತಿ. ಅವಳ ಆ ಪ್ರೀತಿ- ತ್ಯಾಗಕ್ಕೆ ನಾವೇನು ಮಾಡಿದರು ಕಡಿಮೆಯೇ. ದಿನವೂ ಆ ಪ್ರೀತಿಯನ್ನು ನೆನೆಯುವುದು ನಮ್ಮ ಕರ್ತವ್ಯ, ಆದರೆ ಒಂದು ದಿನ ಮಾತ್ರ ನಾವೆಲ್ಲರೂ ವಿಶೇಷವಾಗಿ ಆ ತಾಯಿಯನ್ನು ನೆನೆಯುತ್ತೇವೆ ಅದೇ ’ ವಿಶ್ವ ತಾಯಂದಿರ ದಿನ’ದಂದು. ಹೌದು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದೊಂದು ಸುಂದರ ದಿನ. ಪ್ರತೀ ವರ್ಷ ಮೇ ತಿಂಗಳ 2ನೇಯ ಭಾನುವಾರದಂದು ವಿಶ್ವ ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ. ಕುಂದಾಪ್ರ ಡಾಟ್ ಕಾಂ ಲೇಖನ.

ತಾಯಂದಿರ ದಿನ ಹೇಗೆ ಶುರುವಾಯಿತು?
1908ರಲ್ಲಿ ಅಮೇರಿಕಾದಲ್ಲಿ ಇದು ಶುರುವಾಗಿತ್ತಂತೆ. ಅಮೇರಿಕಾದ ಶಾಂತಿ ಕಾರ್ಯದರ್ಶಿ ಆಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅನಾ ಜಾರ್ವಿಸ್‌ಗೆ ಮದುವೆ ಆಗಿರಲಿಲ್ಲ ತಾಯಿಯೇ ತನಗೆಲ್ಲಾ ಅಂದುಕೊಂಡಿದ್ದಳು. ಆದರೆ 1905ರಲ್ಲಿ ಅನಾ ತಾಯಿ ಮರಣ ಹೊಂದಿದರು. ತನ್ನ ತಾಯಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನ ಆಯ್ಕೆ ಮಾಡಿಕೊಂಡಿದ್ದಳು. ಹಾಗಾಗಿ ಈ ಮದರ್ಸ್ ಡೇಯ ಹುಟ್ಟು ಆದದ್ದು ಅಮೇರಿಕಾದಲ್ಲಿ.

ಅಮ್ಮ ಎಂದರೆ ಮೈ ಮನವೆಲ್ಲಾ ಹೂವಾಗುವುದಮ್ಮ:
ಹೌದು, ಅಮ್ಮಾ ಎನ್ನುವ ಪದವೇ ಹಾಗೇ ಪ್ರತೀ ಬಾರಿ ಕೇಳಿದಾಗಲೆಲ್ಲಾ ಮನಸಲ್ಲಿ ಏನೋ ಒಂಥರ ಖುಷಿ, ಏನೋ ಒಂಥರದ ತಲ್ಲಣ. ಹುಟ್ಟಿದ ಮೊದಲು ಮಾತಾಡುವ ತೊದಲ ನುಡಿಯ ಪದವೇ ಅಮ್ಮಾ, ಬಿದ್ದಾಗ ಆ ನೋವಲ್ಲೂ ಹೇಳುವ ಹೆಸರೇ ಅಮ್ಮಾ, ಖುಷಿಯಾದಾಗ ಮನಸ್ಸಲ್ಲಿ ಥಟ್ಟನೆ ನೆನಪಾಗುವ ನೆನಪೇ ಅಮ್ಮಾ. ಇಷ್ಟು ಸಾಕಲ್ಲವೇ ಅಮ್ಮನ ಪ್ರೀತಿ ಅದೆಷ್ಟೆಂದು ಅರ್ಥ ಮಾಡಿಕೊಳ್ಳಲು! ಹೊತ್ತು- ಹೆತ್ತು, ಸಾಕಿ-ಸಲುಹಿ, ಒಂದು ಮಗುವಿಗೆ ವ್ಯಕ್ತಿತ್ವವುಳ್ಳ ವ್ಯಕ್ತಿ ರೂಪ ಕೊಡುವ ಆ ಮಹಾನ್ ಶಕ್ತಿ ತಾಯಿಗಲ್ಲದೇ ಮತ್ಯಾರಿಗಿದೇ ಹೇಳಿ? ಮತ್ತೇ ಮತ್ತೇ ಕರೆಯುವಾ ಆ ಹೆಸರಿಗೆ ಪ್ರೀತಿಯಲ್ಲದೇ ಮತ್ತೇನನ್ನು ಕೊಡಲು ಸಾಧ್ಯ! ಆ ಗರ್ಭದಿಂದ ಹೊರಬಂದಾಗ ಅವಳು ಅನುಭವಿಸಿದ ನೋವಿಗೆ ನಾವು ಕೊನೆವರೆಗೂ ಕೊಡುವ ಮದ್ದು ಅಂದ್ರೆ ಅದು ಪ್ರೀತಿ ಮಾತ್ರ.

ಈ ಹಾಡು ಕೇಳಿ

ಅಮ್ಮ ಹಚ್ಚಿದೊಂದು ಹಣತೆ ಇನ್ನು ಬೆಳಗಿದೆ:
ಅಮ್ಮ ಹಚ್ಚಿದೊಂದು ಹಣತೆ ಇನ್ನು ಬೆಳಗಿದೆ. ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ. ನಿಜ, ಅವಳು ಹಚ್ಚಿದ ಬೆಳಕೇ ನಮ್ಮ ಈ ಬದುಕು. ಆ ಪ್ರೀತಿಯೇ ತೈಲ- ತ್ಯಾಗವೇ ಬತ್ತಿ ಇವೆರಡು ಈ ಬದುಕನ್ನೇ ಬೆಳಕಾಗಿಸಿದೆ.

ಕಣ್ಣಿಗೆ ಕಾಣುವ ದೇವರು:
ಉಪನಿಷತ್ತುಗಳಲ್ಲಿಯೂ ಬಣ್ಣಿಸಿದ್ದಾರೆ ’ಗರ್ಭದಲ್ಲಿರುವಾಗ ಶಿಶುವಿಗೆ ಪರಮಾತ್ಮನ ದರ್ಶನವಾಗುವುದೆಂದು’ ಹಾಗಾದರೆ ಅದೆಷ್ಟು ಪವಿತ್ರವಿರಬಹುದು ಅಮ್ಮನ ಗರ್ಭ. ತಾಯಿ ಖುಷಿಯಾಗಿದ್ದರೆ ಒಂದು ಕುಟುಂಬವೇ ಖುಷಿಯಾಗಿರುತ್ತಂತೆ, ಕುಟುಂಬ ಖುಷಿಯಾಗಿದ್ದರೆ ದೇಶವೇ ಖುಷಿಯಾಗಿರುತ್ತಂತೆ. ಇವತ್ತು ನಮ್ಮನ್ನು ಕೂಡ ಇಷ್ಟಪಡುವವರು ಪ್ರೀತಿಸುವವರು ನಮ್ಮ ಸುತ್ತ-ಮುತ್ತ ಇದ್ದಾರೆ. ಆದರೆ ಇವರೆಲ್ಲ ನಮ್ಮನ್ನು ಪ್ರೀತಿಸಲು ಆರಂಭಿಸಿದ್ದೇ ನಾವು ಒಂದು ವ್ಯಕ್ತಿತ್ವ ಆದ ಬಳಿಕ. ನಾವು ಏನೂ ಅಲ್ಲದ, ಒಂದು ರೂಪವೂ ಇಲ್ಲದ ಕಾಲದಲ್ಲಿ ಈ ಲೋಕಕ್ಕೆ ಬರುವುದಕ್ಕಿಂತ ಮೊದಲೇ ನಮ್ಮನ್ನ ಪ್ರೀತಿಸಿ ನಮಗಾಗಿ ಕಾದವಳು ಆ ತಾಯಿ ಎಂಬ ದೇವರು. ತಾಯಿಯ ಮಡಿಲು, ತಂದೆಯ ಹೆಗಲು ಈ ಪ್ರಪಂಚದಲ್ಲೇ ಅತ್ಯಂತ ಪವಿತ್ರ ಸ್ಥಳವಂತೆ ಆ ಮಡಿಲಿಗಿಂತ ಪುಣ್ಯಸ್ಥಳ ಬೇರೆನಿದೆ ಹೇಳಿ? ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಎಂತಹ ಆತ್ಮೀಯರು ಕೈಕೊಟ್ಟು ಕೂರಬಹುದು ಆದರೆ ಈ ಮಹಾನ್ ತಾಯಿಗೆ ನಮ್ಮ ಕಷ್ಟ ಅವಳ ಕಷ್ಟ ಎಂದುಕೊಂಡು ಮನದಲ್ಲೇ ಮರುಗಿದಳು.

ತಾಯಿ ಕಲಿಸಿದ ಮಾತು, ತಾಯಿ ಜೊತೆ ಕಳೆದ ಹೊತ್ತು, ತಾಯಿ ಕಲಿಸಿದ ಪಾಠ, ತಾಯಿ ಜೊತೆ ಇಟ್ಟ ಪುಟ್ಟ ಹೆಜ್ಜೆ, ತಾಯಿ ಕೊಟ್ಟ ಮುತ್ತು, ತಾಯಿ ಮಾಡಿಸಿದ ಊಟ, ತಾಯಿ ತೂಗಿದ ತೊಟ್ಟಿಲು, ತಾಯಿ ನಿರ್ಮಿಸಿದ ನಗು, ತಾಯಿಯ ಒಲವಿನ ಸ್ಪರ್ಶ ಕೋಟಿ ಕೊಟ್ಟರೂ ಸಿಗದು. ಇದೊಂದು ಪವಿತ್ರವಾದ ನಂಟು ಇಂದಿಗೂ ಎಂದೆದಿಗೂ.

ಇಂದು ನಮ್ಮ ಬಳಿ ವಾಸಿಸಲು ದೊಡ್ಡ ದೊಡ್ಡ ಮನೆಗಳಿರಬಹುದು, ಆದರೆ ಅಂದು ಅವಳ ಆ ಪುಟ್ಟ ಮಡಿಲೇ ಅರಮನೆ ಆಗಿತ್ತು ಅಲ್ಲವೇ? ನಾವಿಂದು ಜಗತ್ತಿನೆಲ್ಲೆಡೆ ಸ್ವತಂತ್ರವಾಗಿ ನಡೆಯಬಹುದು, ಆದರೆ ನಡೆಯಲಾಗದ ಸ್ಥಿತಿಯಲ್ಲಿ ನನ್ನ ಕೈ ಹಿಡಿದು ನಡೆಸಿದ ಅಮ್ಮನನ್ನು ಮರೆಯಲು ಸಾಧ್ಯವೇ! ಖಂಡಿತಾ ಸಾಧ್ಯವಿಲ್ಲಾ… ತಾಯಿಗಿಂತ ಮಿಗಿಲಾದ ದೇವರಿಲ್ಲ, ಆ ಜೀವ ಬಯಸುವುದು ಮಗುವಿನ ಹಿಡಿಯಷ್ಟು ಪ್ರೀತಿಯನ್ನು ಅದನ್ನು ಕೊಟ್ಟು ಅವಳ ಕೊಂಚ ಋಣವನ್ನಾದರು ತೀರಿಸೋಣ. ಕುಂದಾಪ್ರ ಡಾಟ್ ಕಾಂ ಲೇಖನ.

|| ಮಾತೃದೇವೋ ಭವ..||

ಚೈತ್ರಾ ಆಚಾರ್ಯ ಕೋಟ ಅವರು ಖಾಸಗಿ ಟಿವಿ ವಾಹಿನಿಯ ನಿರೂಪಕಿ, ಕಲಾವಿದೆಯಾಗಿ, ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

 

ಈ ಹಾಡು ಕೇಳಿ

Exit mobile version