Kundapra.com ಕುಂದಾಪ್ರ ಡಾಟ್ ಕಾಂ

ವಿದ್ಯುತ್ ಬಿಲ್ ದರ ವ್ಯತ್ಯಾಸ ಸರಿಪಡಿಸುವಂತೆ ಬೈಂದೂರು ಯುತ್ ಕಾಂಗ್ರೆಸ್ ಮನವಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜನತೆ ಕೋರೋನಾ – ಲಾಕ್‌ಡೌನ್‌ನಿಂದ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ ನಿಗಮಗಳು ದರ ಹೆಚ್ಚಿಸಿ ಹಾಗೂ ಹಿಂದಿನ ಮೂರು ತಿಂಗಳ ಎವರೇಜ್ ಆಧಾರದಲ್ಲಿ ಬಿಲ್ ನೀಡಿರುವುದು ಜನಸಾಮಾನ್ಯರಿಗೆ ಹೊರೆಯಾಗಿದ್ದು, ಕೂಡಲೇ ಇದನ್ನು ಸರಿಪಡಿಸಿ ಇಲ್ಲವೇ ಮೂರು ತಿಂಗಳ ಬಿಲ್ ಮನ್ನಾ ಮಾಡಿ ಎಂದು ಬೈಂದೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.

ಕಳೆದ ಹಲವು ದಿನಗಳಿಂದ ಜನರಿಗೆ ಕೆಲಸ ಕಾರ್ಯವಿಲ್ಲದೇ ಪರದಾಡುತ್ತಿರುವ ಸಂದರ್ಭದಲ್ಲಿ ಏಕಾಏಕಿ ಮೂರು ನಾಲ್ಕು ಪಟ್ಟು ಹೆಚ್ಚಿನ ಬಿಲ್ ನೀಡಿರುವುದು ಜನಸಾಮಾನ್ಯರಿಗೆ ಹೊರೆಯಾಗಿದೆ. ಈ ಬಗ್ಗೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವಾರು ದೂರುಗಳು ಬಂದಿವೆ. ನಿರ್ದಿಷ್ಟ ಬಿಲ್ ನೀಡಿ, ಇಲ್ಲವೇ ಮೂರು ತಿಂಗಳುಗಳ ಬಿಲ್ ಮನ್ನಾ ಮಾಡಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವಂತೆ ಯುವ ಕಾಂಗ್ರೆಸ್ ಮನವಿಯಲ್ಲಿ ತಿಳಿಸಿದೆ.

ಬೈಂದೂರು ಉಪ ತಹಶೀಲ್ದಾರರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಬೈಂದೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಉಪ್ಪುಂದ ಮನವಿ ಹಸ್ತಾಂತರಿಸಿದರು. ಮಾಣಿಕ್ಯ ಹೋಬಳಿದಾರ್, ಮಂಜುನಾಥ ಪೂಜಾರಿ ಹೊಸ್ಕೋಟೆ, ಕಿರಣ ಗಾಣಿಗ ಉಪ್ಪುಂದ ಈ ಸಂದರ್ಭ ಇದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version