Kundapra.com ಕುಂದಾಪ್ರ ಡಾಟ್ ಕಾಂ

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ: ಬೈಂದೂರು ಬ್ಲಾಕ್ ಮಹಿಳಾ ಕಾಂಗ್ರೆಸ್‌ ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಹಲವೆಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮಿತಿಮೀರಿದ್ದು ಇದುವೆರೆಗೆ ತಾಲೂಕು ಪಂಚಾಯತ್ ಅಥವಾ ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಬೈಂದೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೌರಿ ದೇವಾಡಿಗ ಆಗ್ರಹಿಸಿದ್ದಾರೆ.

ಬುಧವಾರ ಬೈಂದೂರು ತಹಸೀಲ್ದಾರರ ಮೂಲಕ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಬೈಂದೂರು ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅಭಾವ ತಲೆ ದೋರಿದೆ. ಪ್ರತೀ ವರ್ಷ ಮಾರ್ಚ್ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೋರುತ್ತಿದ್ದು, ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆಗೆ ಜಿಲ್ಲಾಡಳಿತ ಸ್ಪಂದಿಸುತ್ತಿತ್ತು. ಆದರೆ ಈ ವರ್ಷ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಮೇ ತಿಂಗಳು ಅರ್ದ ಕಳೆದರೂ ಕುಡಿಯುವ ನೀರಿನ ಪೂರೈಕೆ ಮಾಡುವಲ್ಲಿ ಸ್ಥಳೀಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ ಎಂದವರು ಆರೋಪಿಸಿದ್ದಾರೆ. ಕೊರೊನಾ ಮಾಹಾಮಾರಿಯಿಂದಾಗಿ ಜನರೂ ಹೊರ ಹೋಗಲು ಭಯಪಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಇರುವ ಕಡೆಗಳಲ್ಲಿ ಟ್ಯಾಂಕರ್ ಅಥವಾ ಮತ್ತಿನ್ಯಾವುದೇ ಪರಿಹಾರ ಮಾರ್ಗಗಳ ಮೂಲಕ ಕುಡಿಯುವ ನೀರಿನ ಪೂರೈಕೆಗಾಗಿ ತಕ್ಷಣದಿಂದ ಕಾರ್ಯಪ್ರವೃತ್ತವಾಗಬೇಕು ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭ ತಾಲೂಕು ಪಂಚಾಯತ್ ಸದಸ್ಯ ಜಗದೀಶ್ ದೇವಾಡಿಗ, ಕಂಬದಕೋಣೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಾರ್ವತಿ ಪೂಜಾರಿ, ಪಡುವರಿ ಗ್ರಾಮ ಪಂಚಾಯತ್ ಸದಸ್ಯೆ ಸೂರ್ಯಕಾಂತಿ, ನಾವುಂದ ಗ್ರಾಮ ಪಂಚಾಯತ್ ಸದಸ್ಯೆ ಜಯಂತಿ ಶೆಡ್ತಿ, ಯಡ್ತರೆ ಗ್ರಾಮ್ ಪಂಚಾಯತ್ ಸದಸ್ಯೆಯರಾದ ನಾಗಮ್ಮ ಎಸ್, ಶಾಂತಿ ಪಿರೇರಾ ಇದ್ದರು.

Exit mobile version