ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೊರ ರಾಜ್ಯಗಳಿಂದ ಮರಳುತ್ತಿರುವವರನ್ನು ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧೆಡೆ ಗುರುತಿಸಲಾಗಿರುವ ಸ್ಥಳಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದ್ದು, ಕಳೆದ ಸೋಮವಾರದಿಂದ ಇಲ್ಲಿಯ ತನಕ ಬೈಂದೂರು ಹಾಗೂ ಕುಂದಾಪುರ ತಾಲೂಕಿನಲ್ಲಿ ಒಟ್ಟು 2,199 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಬೈಂದೂರು ತಾಲೂಕಿಗೆ ಮೇ.4ರಿಂದ ಮಹಾರಾಷ್ಟ್ರದಿಂದ 1,299, ತೆಲಂಗಾಣದಿಂದ 146, ಆಂಧ್ರಪ್ರದೇಶದಿಂದ 12, ಗೋವಾದಿಂದ 11, ಗುಜರಾತ್‌ನಿಂದ 3 ಮತ್ತು ಕೇರಳದಿಂದ ಇಬ್ಬರು ಬಂದಿದ್ದಾರೆ. ಕುಂದಾಪುರ ತಾಲೂಕಿಗೆ ಮಹಾರಾಷ್ಟ್ರದಿಂದ 322, ತೆಲಂಗಾಣದಿಂದ 194, ಕೇರಳದಿಂದ 1, ಗುಜರಾತ್‌ನಿಂದ 8, ಗೋವಾದಿಂದ 1 ಹಾಗೂ ತಮಿಳುನಾಡಿನಿಂದ 7 ಮಂದಿ ಬಂದಿದ್ದಾರೆ. ಇವರೆಲ್ಲರೂ ಬೈಂದೂರು ತಾಲ್ಲೂಕಿನ ಶಿರೂರು, ಕೊಲ್ಲೂರು ಹಾಗೂ ಕುಂದಾಪುರ ತಾಲ್ಲೂಕಿನ ಹೊಸಂಗಡಿ ಮೂಲಕ ಜಿಲ್ಲೆ ಪ್ರವೇಶಿಸಿದ್ದಾರೆ. ಅಲ್ಲಿನ ಚೆಕ್‌ಪೋಸ್ಟ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ತಪಾಸಣೆಗೆ ಒಳಪಡಿಸಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಲಭೂತ ಸೌಕರ್ಯದ ಬಗ್ಗೆ ಅಸಮಾಧಾನ:
ಸರಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿತ್ತು. ಕುಡಿಯುವ ನೀರಿನ ಕೊರತೆ, ಸಮರ್ಪಕ ನಿರ್ವಹಣೆ ಇಲ್ಲದ ಶೌಚಾಲಯಗಳು ಕ್ವಾರಂಟೈನ್ ಕೇಂದ್ರಗಳಲ್ಲಿ ಸಾಮಾನ್ಯವಾಗಿದ್ದವು. ಆರಂಭದ ನಾಲೈದು ದಿನ ಕ್ವಾರಂಟೈನ್ ಕೇಂದ್ರಗಳ ಅವ್ಯವಸ್ಥೆಯಿಂದಾಗಿ ಜನರು ಪರದಾಡುವಂತಾಗಿತ್ತು. ಬೆಳಿಗ್ಗೆ ತಿಂಡಿ ಹಾಗೂ ಮಧ್ಯಾಹ್ನ-ರಾತ್ರಿಯ ಊಟವೂ ಸರಿಯಾದ ಸಮಯಕ್ಕೆ ಕ್ವಾರಂಟೈನ್ ಕೇಂದ್ರಗಳಿಗೆ ತಲುಪಿರಲಿಲ್ಲ. ಕ್ವಾರಂಟೈನ್ ಕೇಂದ್ರಗಳ ಉಸ್ತುವಾರಿ ವಹಿಸಿಕೊಂಡಿರುವ ಸಿಬ್ಬಂದಿಗಳು ಜನರಿಗೆ ಸೌಕರ್ಯ ಒದಗಿಸಲು ಪರದಾಡುತ್ತಿದ್ದರು. ಶಿರೂರು ಗಡಿಯಲ್ಲಿರುವ ತಪಾಸಣಾ ಕೇಂದ್ರಗಳಲ್ಲಂತೂ ಜನರು ಗಂಟೆಗಟ್ಟಲೆ ಲೈನಿನಲ್ಲಿ ನಿಂತು ಫಾರ್ಮ್ ತುಂಬಿಸುವುದಲ್ಲದೇ ತಪಾಸಣೆಯ ಬಳಿಕವೂ ಬಿಸಿಲಿನಲ್ಲಿಯೇ ಕಾಯಬೇಕಾದ ಪರಿಸ್ಥಿತಿ ಇತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಜಿಲ್ಲಾಡಳಿತ, ತಾಲೂಕು ಆಡಳಿತ ಮೇಲಿಂದ ಮೇಲೆ ಮೀಟಿಂಗ್ ಮಾಡಿದ್ದರೂ ಕ್ವಾರಂಟೈನ್ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ವಿಫಲವಾಗಿರುವ ಬಗ್ಗೆ ಹೊರರಾಜ್ಯಗಳಿಂದ ಬಂದವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಊರಿಗೆ ತೆರಳಿದರೆ ನೆಮ್ಮದಿ ಎಂಬ ಕಾರಣಕ್ಕೆ ಇಲ್ಲಿ ಬಂದರೆ ಇಲ್ಲಿಯೂ ನಮ್ಮನ್ನು ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿದೆ. ಕನಿಷ್ಠ ಸೌಲಭ್ಯವನ್ನೂ ಒದಗಿಸಲು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಸಾಧ್ಯವಾಗದೇ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

