Kundapra.com ಕುಂದಾಪ್ರ ಡಾಟ್ ಕಾಂ

ವರದಿಗಾರನೆಂದು ಮಾವನಿಗೆ ಬೆದರಿಕೆ ಹಾಕಿದ ಕತರ್ನಾಕ್ ಅಳಿಯ

ಬೈಂದೂರು: “ನಾನು ಸುವರ್ಣ ಸುದ್ದಿ ವಾಹಿನಿಯ ವರದಿಗಾರ ಮಾತನಾಡುತ್ತಿರುವುದು. ನಿಮ್ಮ ಅಸಲಿ ಬಂಡವಾಳದ ವೀಡಿಯೋ ನನ್ನ ಬಳಿಯಿದ್ದು ಅದನ್ನು ಸುವರ್ಣ ವಾಹಿನಿಯಲ್ಲಿ ಬಿತ್ತರಿಸಿ ಮಾನ ಮರ್ಯಾದೆಯನ್ನು ಹರಾಜು ಮಾಡುತ್ತೇನೆ. 2 ಲಕ್ಷ ರೂಪಾಯಿಯನ್ನು ಸೋಮವಾರ ಕುಂದಾಪುರದ ಮಣಿಪಾಲ ಬೇಕರಿ ಬಳಿ ತೆಗೆದುಕೊಂಡು ಬಾ ಇಲ್ಲದಿದ್ದರೆ ನಿನ್ನ ಮಗನನ್ನು ಕೊಲೆ ಮಾಡುತ್ತೇನೆ” ಹೀಗೆ ತನ್ನ ಸ್ವಂತ ಮಾವನಿಗೆ ಬೆದರಿಗೆ ಹಾಕಿ ಹಣ ಎಗರಿಸಲು ಹೊರಟಿದ್ದ ಅಳಿಯ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಉಪ್ಪುಂದದ ಪ್ರದೀಪ ಖಾರ್ವಿ (23) ಸಿಸಿಬಿ ಪೊಲೀಸರು ಬಂಧಿಸಿದ ಬಿದ್ದ ನಕಲಿ ವರದಿಗಾರ. .

ಘಟನೆಯ ವಿವರ:
ತ್ರಾಸಿಯಲ್ಲಿ ಬೋಟ್‌ಗಳಿಗೆ ಜಿಪಿಎಸ್ ಅಳವಡಿಸುವ ಅಂಗಡಿ ಹೊಂದಿದ್ದ ಪ್ರದೀಪ ಖಾರ್ವಿ ಶನಿವಾರ ಬೆಳಗ್ಗೆ 12ಗಂಟೆ ಸುಮಾರಿಗೆ ತನ್ನ ಸ್ವಂತ ಮಾವನಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ, ಉಪ್ಪುಂದ ಕರ್ಕಿಕಳಿ ನಿವಾಸಿ ಅಣ್ಣಪ್ಪ ಖಾರ್ವಿ ಎಂಬುವವರಿಗೆ ದೂರವಾಣಿ ಕರೆ ಮಾಡಿ ತಾನು ಸುವರ್ಣ ನ್ಯೂಸ್ ವರದಿಗಾರನಾಗಿದ್ದು ತಮ್ಮ ಬಗ್ಗೆ ಇರುವ ವೀಡಿಯೊ ತುಣುಕೊಂದು ನನ್ನ ಬಳಿ 2 ಲಕ್ಷ ನೀಡದಿದ್ದರೇ ಅದನ್ನು ವಾಹಿನಿಯಲ್ಲಿ ಬಿತ್ತರಿಸುವುದಾಗಿ ಬೆದರಿಸಿದ್ದ. ಮತ್ತೆ ಜುಲೈ6ರಂದು ಬೆಳಿಗ್ಗೆ 10:00 ಗಂಟೆಯಿಂದ ಸತತ 10 ಸಲ ಕರೆ ಮಾಡಿ ನೀನು 2 ಲಕ್ಷ ರೂಪಾಯಿಯನ್ನು ಕೊಡದೇ ಇದ್ದಲ್ಲಿ ನಿನ್ನನ್ನು ಹಾಗೂ ನಿನ್ನ ಮಗನನ್ನು ಕೊಂದು ಬಿಸಾಡುತ್ತೇನೆ ಎಂದು ಧಮಕಿ ಹಾಕಿದ್ದ.

ಆರೋಪಿ ಪ್ರದೀಪ್ ಖಾರ್ವಿಯು ಆತನ ಬಳಿಯಲ್ಲಿದ್ದ ಸುಳ್ಳು ಸಿಡಿಯನ್ನು ಉಪಯೋಗಿಸಿ ಮಾನ ಮರ್ಯಾದೆಯನ್ನು ತೆಗೆಯಬಹುದು ಮತ್ತು ತನ್ನ ಮಗನಿಗೆ ಅಪಾಯ ತಂದೊಡ್ಡಬಹುದು ಎಂದು ಹೆದರಿದ ಅಣ್ಣಪ್ಪ ಖಾರ್ವಿ ಒಂದೂವರೇ ಲಕ್ಷ ಹಣ ನೀಡಲು ಒಪ್ಪಿಕೊಂಡಿದ್ದರು. ಆದರೆ ಬಳಿಕ ಪೊಲೀಸರಿಗೂ ಬೆದರಿಕೆ ಕರೆ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದರು.

ಮಾತಿನಂತೆ ಹಣ ನೀಡಲು ಬರುವ ಅಣ್ಣಪ್ಪ ಖಾರ್ವಿಯವರಿಗೆ ವಿಡಿಯೋ ಸಿಡಿ ನೀಡಲು ಕುಂದಾಪುರಕ್ಕೆ ಬಂದಿದ್ದ ಯುವಕನೋರ್ವ ಪೊಲೀಸ್ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ. ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ ಈ ಸಂಚಿನ ಮುಖ್ಯ ರೂವಾರಿ ಪ್ರದೀಪ್ ಖಾರ್ವಿ ಮಣಿಪಾಲದಲ್ಲಿ ಇರುವುದು ತಿಳಿದುಬಂತು. ಕೂಡಲೇ ಸಿಸಿಬಿ ಪೊಲೀಸರು ಮಣಿಪಾಲದಲ್ಲಿದ್ದ ಆರೋಪಿ ಪ್ರದೀಪನನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಕಾರನ್ನೂ ವಶಪಡಿಸಿಕೊಂಡಿದ್ದಾರೆ.

ತನ್ನ ಸ್ವಂತ ಅಳಿಯನ ಈ ಕೃತ್ಯವನ್ನು ಕಂಡು ಮಾವ ಅಣ್ಣಪ್ಪ ಖಾರ್ವಿ ದಂಗಾಗಿ ಹೋಗಿದ್ದಾರೆ. ಮಾವ ತನಗೆ ಹಣ ನೀಡಲು ಸತಾಯಿಸುತ್ತಿದ್ದರು ಆದ್ದರಿಂದ ಈ ರೀತಿ ಮಾಡಬೇಕಾಯಿತು ಎಂದು ಅಳಿಯ ಪ್ರದೀಪ ಹೇಳಿಕೊಂಡಿದ್ದಾನೆ. ಈತನ ಬಗ್ಗೆ ಹಲವು ಬಾರಿ ಕಳ್ಳತನ, ಮೋಸದ ಆರೋಪಗಳು ಈ ಹಿಂದೆ ಕೇಳಿಬಂದಿದ್ದವು. ಒಂದು ಪ್ರಕರಣದಲ್ಲಿ ಅಣ್ಣಪ್ಪ ಖಾರ್ವಿಯೇ ಈತನನ್ನು ಪೊಲೀಸರಿಂದ ರಾಜಿ ಮಾಡಿಸಿದ್ದರೆನ್ನಲಾಗಿದೆ. ಸುವರ್ಣ ನ್ಯೂಸ್ ಹೆಸರು ಹೇಳಿಕೊಂಡಿದ್ದರಿಂದ ವಿಷಯ ಹೇಗೋ ವಾಹಿನಿಯ ಬೆಂಗಳೂರಿನ ಕಛೇರಿಗೆ ತಲುಪಿ, ಉಡುಪಿಯಲ್ಲಿನ ಅಸಲಿ ವರದಿಗಾರ ಬರುವಂತಾಗಿತ್ತು.

Exit mobile version