Kundapra.com ಕುಂದಾಪ್ರ ಡಾಟ್ ಕಾಂ

ಕೆಲಸ ನೀಡುವುದಾಗಿ ಹೇಳಿ ಮಹಿಳೆಗೆ ವಂಚನೆ

ಬೈಂದೂರು: ಅರಣ್ಯ ಇಲಾಖೆಯ ಹಾಗೂ ಕೇಂದ್ರ ಸರಕಾದ ಹೆಸರಿನಲ್ಲಿ ಸುಳ್ಳು ದಾಖಲೆ ಹಾಗೂ ಮೊಹರು ಹಾಗೂ ವೆಬ್ಸೈಟ್ ಸೃಷ್ಟಿಸಿ ಸುಳ್ಳು ಉದ್ಯೋಗ ಮಾಹಿತಿಯನ್ನು ನೀಡಿ ಮಹಿಳೆಯೋರ್ವರನ್ನು ವಂಚಿಸಿದ ಘಟನೆ ಬೈಂದೂರಿನ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಿರಿಮಂಜೇಶ್ವರ ನಿವಾಸಿ ನಾಗರತ್ನ ವಂಚನೆಗೊಳಗಾದ ಮಹಿಳೆ.

ಘಟನೆಯ ವಿವರ:
ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಲು ಪುರುಷ/ಮಹಿಳೆಯರು ಬೇಕಾಗಿದ್ದಾರೆ ಎಂಬುದಾಗಿ ಪತ್ರಿಕೆಯಲ್ಲಿ ಜಾಹಿರಾತನ್ನು ನೀಡಿದ್ದರು. ಜಾಹೀರಾತಿನಲ್ಲಿರುವ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಂಡ ನಾಗರತ್ನ ನೇಮಕಾತಿಗೆ ತರಬೇತಿಗಾಗಿ ಹಾಗೂ ವಿಮೆಗಾಗಿ ಸತತ ಹಣವನ್ನು ಜಮೆ ಮಾಡಿದ್ದು ಕೊನೆಯಲ್ಲಿ ಅನುಮಾನ ಬಂದು ಇಲಾಖೆಯಲ್ಲಿ ಈ ವಂಚನೆ ವಿಷಯ ಬೆಳಕಿಗೆ ಬಂದಿದೆ.

ನಾಗರತ್ನ ಅವರು ಗೌತಮ್‌ ಕುಮಾರ್‌ ಎನ್ನುವವನ ಖಾತೆಗೆ ರೂ. 2ಸಾವಿರ ಹಣವನ್ನು ಜಮೆ ಮಾಡಿದ ಬಳಿಕ ನೇಮಕಾತಿ ಪತ್ರ ಅಂಚೆ ಮೂಲಕ ಬಂದಿದ್ದು 7 ದಿನಗಳ ತರಬೇತಿ ಇರುತ್ತದೆ ಎಂದು ನಮೂದು ಮಾಡಲಾಗಿತ್ತು. ನಂತರ ಕರೆಮಾಡಿದ ಆಕೆಗೆ ವಿಚಾರಿಸಿದಾಗ ತರಬೇತಿ ಸಮಯದಲ್ಲಿ ಮೊಬೈಲ್‌ , ಲ್ಯಾಪ್‌ಟಾಪ್‌ ಇತ್ಯಾದಿ ವಸ್ತುಗಳನ್ನು ನೀಡಲು ಇರುವುದರಿಂದ ಜಾಮೀನು ನೀಡಲು 19,500ಧಿ ರೂ. ಖಾತೆಗೆ ಜಮೆ ಮಾಡಬೇಕು, ತರಬೇತಿ ಮುಗಿದ ಬಳಿಕ ಹಣವನ್ನು ವಾಪಾಸ್ಸು ನೀಡುವುದಾಗಿ ತಿಳಿಸಿದ್ದರು. ಅದರಂತೆ ಆಕೆ ಖಾತೆಗೆ ಹಣ ಜಮೆ ಮಾಡಿರುತ್ತಾರೆ. ನಂತರ ವಿಮೆಗೆ ಎಂದು 20,500 ರೂ. ಹಣವನ್ನು ಮತ್ತೆ ಖಾತೆಗೆ ಜಮೆ ಮಾಡಿದ್ದರು. ಈ ಬಗ್ಗೆ ಹಣವನ್ನು ಸ್ವೀಕರಿಸಿದ ಬಗ್ಗೆ ದಾಖಲಾತಿಯನ್ನೂ ಈ ಮೈಲ್‌ ಮೂಲಕ ಕಳುಹಿಸಿದ್ದರು. ನಂತರ ಕೆಲಸ ಕೊಡಬೇಕಾದರೆ 60ಸಾವಿರ ರೂ.ಕಟ್ಟಬೇಕಾಗುತ್ತದೆ ಎಂದು ತಿಳಿಸಿದಾಗ ಅನುಮಾನಗೊಂಡ ನಾಗರತ್ನ ಅವರು ಬೈಂದೂರಿನ ಅರಣ್ಯ ಇಲಾಖೆಯಲ್ಲಿ ಈ ಬಗ್ಗೆ ವಿಚಾರಿಸಿದ್ದರು. ಆಗ ಆರೋಪಿಗಳು ನೀಡಿದ ನೇಮಾಕಾತಿ ಪತ್ರ ಸುಳ್ಳು ಎಂಬುದಾಗಿ ತಿಳಿದು ಬಂದಿದೆ.

ವಂಚನೆ ಮಾಡಿದ ಆರೋಪಿಗಳಾದ ಗೌತಮ್‌ ಕುಮಾರ್‌ ಹಾಗೂ ಪವನ್‌ ಕುಮಾರ್‌ ಅವರ ವಿರುದ್ಧ ವಂಚನೆಗೊಳಗಾದ ನಾಗರತ್ನ ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Exit mobile version