Kundapra.com ಕುಂದಾಪ್ರ ಡಾಟ್ ಕಾಂ

ತಾಯಿಯ ಎದುರೇ ನದಿಯಲ್ಲಿ ಕೊಚ್ಚಿಹೊದ ಬಾಲಕಿ

ಕುಂದಾಪುರ: ಶಾಲೆಗೆ ತೆರಳುತ್ತಿದ್ದ ವಿಸ್ಮಯ ದೇವಾಡಿಗ(9) ಎಂಬ ಬಾಲಕಿಯೋರ್ವಳು ತಾಯಿಯೊಂದಿಗೆ ಕಾಲುಸಂಕ ದಾಟುತ್ತಿದ್ದ ವೇಳೆ ಕಾಲುಜಾರಿ ನದಿಗೆ ಬಿದ್ದ ಘಟನೆ ತಾಲೂಕಿನ ಮಾರಣಕಟ್ಟೆಯಲ್ಲಿ ವರದಿಯಾಗಿದ್ದು, ನೀರಿನಲ್ಲಿ ಕೊಚ್ಚಿಹೋದ ಬಾಲಕಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ಘಟನೆಯ ವಿವರ:
ಮಾರಣಕಟ್ಟೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿಯಲ್ಲಿ ಕಲಿಯುತ್ತಿರುವ ವಿಸ್ಮಯ ಎಂದಿನಂತೆ ಶಾಲೆಗೆ ತನ್ನ ತಾಯಿಯೊಂದಿಗೆ ಹೊರಟಿದ್ದಳು. ಬೆಳಿಗ್ಗೆ 8:45ರ ವೇಳೆಗೆ ಮಾರಣಕಟ್ಟೆಯ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಹಿಂಭಾಗದಲ್ಲಿರುವ ಚಕ್ರಾ ಹೊಳೆಗೆ ಅಡ್ಡಲಾಗಿ ಹಾಕಿರುವ ಕಾಲುಸಂಕವನ್ನು ದಾಟುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ನಿನ್ನೆ ಭಾರಿ ಮಳೆ ಇದ್ದ ಕಾರಣ ಚಕ್ರಾ ನದಿಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ವಿಸ್ಮಯಳ ತಾಯಿ ತನ್ನಿಬ್ಬರು ಮಕ್ಕಳ ಕೈಯನ್ನು ಹಿಡಿದುಕೊಂಡು ದಾಟಿಸುತ್ತಿದ್ದಾಗ, ಕಾಲುಸಂಕ ಮಧ್ಯಕ್ಕೆ ಬಂದಾಗ ವಿಸ್ಮಯ ತಾನೊಬ್ಬಳೇ ದಾಟುವುದಾಗಿ ಹೇಳಿ ತಾಯಿಯ ಕೈಬಿಡಿಸಿಕೊಂಡು ಮುಂದಕ್ಕೆ ಹೋಗಿದ್ದಾಳೆ. ಆದರೆ ಒಂದೆರಡು ಹೆಜ್ಜೆ ಇಡುತ್ತಿದ್ದಂತೆಯೇ ಕಾಲು ಜಾರಿ ತುಂಬಿಹರಿಯುತ್ತಿದ್ದ ನದಿಗೆ ಬಿದ್ದಿದ್ದಾಳೆ. ನೀರಿನ ಸೆಳೆತ ಹೆಚ್ಚಿದ್ದರಿಂದ ನೋಡನೋಡುತ್ತಿದ್ದಂತೆಯೇ ನದಿಯೊಂದಿಗೆ ಸೇರಿ ಹೋಗಿದ್ದಳು.
ಇದನ್ನು ದೂರದಲ್ಲಿ ಗಮನಿಸುತ್ತಿದ್ದ ಭಾಸ್ಕರ್ ಎನ್ನುವವರು ಕೂಡಲೇ ಅಲ್ಲಿಗೇ ಧಾವಿಸಿ ಬಂದು ನೀರಿಗೆ ಧುಮುಕಿದರಾದರೂ, ಅಷ್ಟರಲ್ಲಾಗಲೇ ವಿಸ್ಮಯ ಕೊಚ್ಚಿಹೋಗಿದ್ದಳು. ಕೂಡಲೇ ಅಲ್ಲಿಂದ 2ಕಿ.ಮೀ ದೂರದಲ್ಲಿರುವ ಸಿಂಗಾರಗುಂಡಿ ಡ್ಯಾಮ್ ಹಾಗೂ ಮತ್ತೂ ಮುಂದೆ ಇರುವ ಬಾಡಿಬೇರು ಡ್ಯಾಮ್ ಬಳಿ ತೆರಳಿ ನದಿಗೆ ಇಳಿದು ಹುಡುಕಾಟ ಆರಂಭಿಸಿದ್ದರು. ನದಿಗೆ ಬಲೆಯನ್ನು ಹಾಕಿ ಕಾದು ಕುಳಿತಿದ್ದರು. ಆದರೆ ಈವರೆಗೆ ವಿಸ್ಮಯಳ ಸುಳಿವು ಸಿಕ್ಕಿಲ್ಲ. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಹುಡುಕಾಟ ನಡೆಸುತ್ತಿದ್ದಾರೆ.

ಬಡ ಕುಟುಂಬಕ್ಕೊಂದು ಬರೆ
ಮಾರಣಕಟ್ಟೆಯ ಸನ್ಯಾಸಿಬೆಟ್ಟು ಜಲಜಾ ಹಾಗೂ ಶೇಖರ ದೇವಾಡಿಗ ಅವರ ಎರಡು ಮಕ್ಕಳಲ್ಲಿ ಎರಡನೇಯವಳಾದ ವಿಸ್ಮಯ, ಮಾರಣಕಟ್ಟೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಳು. ಓದಿನಲ್ಲೂ ಚುರುಕು. ಶೇಖರ ದೇವಾಡಿಗ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇದೀಗ ಮಗಳನ್ನು ಕಳೆದುಕೊಂಡ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.

ಬೇಡಿಕೆ ಸಲ್ಲಿಸಿದರೂ ಸೇತುವೆಯಿಲ್ಲ:
ಇಲ್ಲಿನ ಸ್ಥಳೀಯರು ಸೇತುವೆ ನಿರ್ಮಿಸಿಕೊಡಲು ಸರಕಾರಕ್ಕೆ ಹಲವು ಭಾರಿ ಬೇಡಿಕೆ ಇಟ್ಟಿದ್ದರು. ಆದರೂ ಈವರೆಗೆ ಅಲ್ಲಿನ ಜನಪ್ರತಿನಿಧಿಗಳು ಸೇತುವೆ ನಿರ್ಮಿಸುವ ಗೋಜಿಗೆ ಹೋಗಿರಲಿಲ್ಲ. ಸ್ಥಳೀಯರೇ ತಮ್ಮ ತಿರುಗಾಟಕ್ಕಾಗಿ ಮರದ ಕಾಲುಸಂಕವನ್ನು ನಿರ್ಮಿಸಿಕೊಂಡಿದ್ದರು. ಮಳೆಗಾಲದಲ್ಲಿ ನೀರು ಈ ಕಾಲುಸಂಕದ ಮಟ್ಟಕ್ಕೆ ಹರಿಯುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಅರಿವಿದ್ದರೂ ಸಹ ಸುಮ್ಮನೆ ಕುಳಿತಿದ್ದರಿಂದ ಒಂದು ಪುಟ್ಟ ಜೀವವನ್ನೇ ಕಳೆದುಕೊಳ್ಳುವಂತಾಯಿತು.

ಘಟನಾ ಸ್ಥಳಕ್ಕೆ ಬೈಂದೂರು ಶಾಸಕರಾದ ಗೋಪಾಲ ಪೂಜಾರಿ, ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ, ಜಿಲ್ಲಾ ಪಂಚಾಯತ್ ಸದಸ್ಯೆ ಇಂದಿರಾ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ಸಂತೋಷ ಮಡಿವಾಳ, ಕುಂದಾಪುರದ ತಹಶೀಲ್ದಾರರಾದ ಗಾಯತ್ರಿ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಮೊದಲಾದವರು ಭೇಟಿ ನೀಡಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version