ಗಂಗೊಳ್ಳಿ: ಗಂಗೊಳ್ಳಿ ಸುತ್ತಮುತ್ತಲಿನ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ವಿದ್ಯುತ್ ಕಡಿತವಾಗುತ್ತಿರುವ ಬಗ್ಗೆ ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿಯ ನಿಯೋಗ ಶನಿವಾರ ಮೆಸ್ಕಾಂ ಗಂಗೊಳ್ಳಿ ಶಾಖೆಗೆ ಭೇಟಿ ನೀಡಿ ಮಾತುಕತೆ ನಡೆಸಿತು.
ದೂರವಾಣಿ ಮೂಲಕ ಮೆಸ್ಕಾಂ ಬೈಂದೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಹಾಗೂ ಮೆಸ್ಕಾಂ ಗಂಗೊಳ್ಳಿ ಶಾಖೆಯ ಜ್ಯೂನಿಯರ್ ಇಂಜಿನಿಯರ್ ಅವರನ್ನು ಸಂಪರ್ಕಿಸಿ ರಾತ್ರಿ ವೇಳೆ ನಿಗದಿತ ಸಮಯದಲ್ಲಿ ಹಾಗೂ ಬೆಳಿಗ್ಗೆ ಅನಿಯಮಿತ ವಿದ್ಯುತ್ ಕಡಿತವಾಗುತ್ತಿರುವ ಹಾಗೂ ಇನ್ನಿತರ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡ ನಾಗರಿಕ ಹೋರಾಟ ಸಮಿತಿ ನೇತೃತ್ವದ ನಾಗರಿಕರ ನಿಯೋಗ ಸಮಸ್ಯೆಗೆ ಅತೀ ಶೀಘ್ರದಲ್ಲಿಯೇ ಪರಿಹಾರ ಕಂಡುಕೊಂಡು ನಿರಂತರ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಕಳೆದ ಕೆಲವು ದಿನಗಳಿಂದ ಅರ್ಥಿಂಗ್ ಸಮಸ್ಯೆಯಿಂದ ಅನೇಕ ಬಾರಿ ವಿದ್ಯುತ್ ಕಡಿತಗೊಳ್ಳುತ್ತಿತ್ತು. ಇದೀಗ ಈ ದೋಷವನ್ನು ಸರಿಪಡಿಸಲಾಗಿದೆ. ರಾತ್ರಿ ವೇಳೆ ಕೆಲವೊಂದು ಕಡೆಗಳಲ್ಲಿ ವಿದ್ಯುತ್ ತಂತಿ ಮೇಲೆ ಮರದ ಕೊಂಬೆಗಳು ಬಿದ್ದಿರುವುದರಿಂದ ವಿದ್ಯುತ್ ಸಂಚಾರದಲ್ಲಿ ತೊಡಕು ಆಗಿತ್ತು. ಆದರೆ ರಾತ್ರಿ ವೇಳೆ ನಿಗದಿತ ಸಮಯದಲ್ಲಿ ವಿದ್ಯುತ್ ಕಡಿತಗೊಳ್ಳುತ್ತಿರುವುದರ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುತ್ತದೆ. ಉದ್ದೇಶಪೂರ್ವಕವಾಗಿ ರಾತ್ರಿ ಹೊತ್ತು ವಿದ್ಯುತ್ ಕಡಿತ ಮಾಡುವುದಿಲ್ಲ. ಯಾರಾದರೂ ಇಂತಹ ಕೃತ್ಯ ನಡೆಸುತ್ತಿರುವುದು ಕಂಡು ಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಮುಂದಿನ 2-3 ದಿನಗಳ ಒಳಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಗಂಗೊಳ್ಳಿ ಗ್ರಾಹಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ವಿದ್ಯುತ್ ಸರಬರಾಜು ಮಾಡಲು ಪ್ರಯತ್ನಿಸುವುದಾಗಿ ಮೆಸ್ಕಾಂ ಬೈಂದೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಯಶವಂತ ಹಾಗೂ ಮೆಸ್ಕಾಂ ಗಂಗೊಳ್ಳಿ ಶಾಖೆಯ ಜ್ಯೂನಿಯರ್ ಇಂಜಿನಿಯರ್ ರಾಘವೇಂದ್ರ ಭರವಸೆ ನೀಡಿದ್ದಾರೆ ಎಂದು ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಸ್.ಚಿಕ್ಕಯ್ಯ ಪೂಜಾರಿ ತಿಳಿಸಿದ್ದಾರೆ.
ಗುಜ್ಜಾಡಿ ಗ್ರಾಪಂ ಅಧ್ಯಕ್ಷ ಹರೀಶ್ ಮೇಸ್ತ, ಗಂಗೊಳ್ಳಿ ಗ್ರಾಪಂ ಸದಸ್ಯ ಲಕ್ಷ್ಮೀಕಾಂತ ಮಡಿವಾಳ, ಗ್ರಾಪಂ. ಮಾಜಿ ಸದಸ್ಯ ಬಿ.ರಾಘವೇಂದ್ರ ಪೈ, ರವೀಂದ್ರ ಪಟೇಲ್, ರತ್ನಾಕರ ಗಾಣಿಗ, ಅಶೋಕ ಪೂಜಾರಿ, ರಾಮಚಂದ್ರ ಶೆಣೈ ಮೊದಲಾದವರು ನಿಯೋಗದಲ್ಲಿದ್ದರು.